ಚಾಮರಾಜನಗರ: ಸುಧಾಕರ್, ಬೊಮ್ಮಾಯಿ, ಅಶೋಕ್ ಹಾಗೂ ಅಶ್ವತ್ಥನಾರಾಯಣ ಎಂಬ ಹುಚ್ಚರು ನಾಲ್ಕು ಕಡೆಗೆ ನಾಲ್ಕು ಮಾತು ಆಡುತ್ತಾರೆ. ಯಡಿಯೂರಪ್ಪ ಸಂಜೆ ನಿರುಪಯುಕ್ತ ಸಭೆ ನಡೆಸುತ್ತಾರೆ ಎಂದು ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಕಿಡಿ ಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಎಂಬುದು ರೋಗಿಗಳನ್ನು ಆತಂಕಕ್ಕೀಡು ಮಾಡಿದೆ. ಈ ಹೊತ್ತಿನಲ್ಲಿ ಸರ್ಕಾರದ ಕ್ರಮಗಳೇನು? ಸುಧಾಕರ್, ಬೊಮ್ಮಾಯಿ, ಅಶೋಕ್ ಹಾಗೂ ಅಶ್ವತ್ಥನಾರಾಯಣ ಎಂಬ ಹುಚ್ಚರು ನಾಲ್ಕು ಕಡೆಗೆ ನಾಲ್ಕು ಬೇರೆ ಬೇರೆ ಮಾತು ಆಡುತ್ತಾರೆ. ಯಡಿಯೂರಪ್ಪ ಸಂಜೆ ನಿರುಪಯುಕ್ತ ಸಭೆ ನಡೆಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಟಾಳ್ ಗುಡುಗಿದರು.
ನಾಟಕವಾಡುವುದನ್ನ ಬಿಡಿ
ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾಟಕ ಆಡುವುದನ್ನು ಬಿಟ್ಟು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸುತ್ತೀರೋ ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಬೇರೆ ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ವಿದ್ಯಾರ್ಥಿಗಳನ್ನು ಪಾಸ್ ಮಾಡಿ. ಅದನ್ನು ಬಿಟ್ಟು ಮಕ್ಕಳಿಗೆ ಪರೀಕ್ಷೆ ಹೆಸರಲ್ಲಿ ತೊಂದರೆ ಕೊಟ್ಟು ಅವರನ್ನು ಬೀದಿಗೆ ತರಬೇಡಿ ಎಂದರು.
ಚಾಮರಾಜನಗರ ದುರಂತಕ್ಕೆ ಕಾರಣದವರಿಗೆ ಶಿಕ್ಷೆ ಯಾಕಿಲ್ಲ
ಲಸಿಕೆಯನ್ನು ಮಾರಿದ ವೈದ್ಯೆಯನ್ನು ಜೈಲಿಗೆ ಹಾಕಿದ್ದೀರಿ. 24 ಮಂದಿ ಸಾವಿಗೆ ಕಾರಣರಾದವರನ್ನು ಏಕೆ ಇನ್ನೂ ಶಿಕ್ಷಿಸಿಲ್ಲ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು. ದುರಂತದಲ್ಲಿ ಸತ್ತವರ ಕುಟುಂಬಕ್ಕೆ 2 ಲಕ್ಷ ರೂ. ಕೊಟ್ಟಿರುವುದು ಕಡ್ಲೆಪುರಿ ಕೊಳ್ಳಲು ಸಾಲುವುದಿಲ್ಲ. ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರವನ್ನು ಕೂಡಲೇ ಕೊಡಬೇಕು. ಚಾಮರಾಜನಗರಕ್ಕೆ ಸಿಎಂ ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬರ್ತಾರೆ ಡ್ಯಾನ್ಸ್ ಮಾಡಿ ಹೋಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಈಗ ದಿಕ್ಕೆಟ್ಟ ನಗರವಾಗಿದೆ, ಜಿಲ್ಲಾಡಳಿತ ಸತ್ತು ಹೋಗಿದೆ. ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ನ್ಯಾಯಾಂಗ ತನಿಖೆ ಮುಗಿದಿದ್ದರೂ ಶಿಕ್ಷೆ ನೀಡದಿದ್ದರೆ ರಾಜ್ಯ ಸರ್ಕಾರವೇ ಅಪರಾಧ ಮಾಡಿದಂತಾಗುತ್ತದೆ. ಇನ್ನು 15 ದಿನಗಳಲ್ಲಿ ಚಾಮರಾಜನಗರ ದುರಂತಕ್ಕೆ ಕಾರಣರಾದವರಿಗೆ ಶಿಕ್ಷೆ ಕೊಡದಿದ್ದರೆ ಕರಾಳ ದಿನ ಆಚರಿಸುತ್ತೇನೆ ಎಂದು ಎಚ್ಚರಿಸಿದರು.