ಚಾಮರಾಜನಗರ: ಸಾರ್ವಜನಿಕ ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮನೆಮಂದಿ ಸುತ್ತಾಡಿ, ಕಾಡಿನಲ್ಲಿ ಕ್ರಿಕೆಟ್ ಆಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೂದಿಪಡಗ ಗೆಸ್ಟ್ ಹೌಸ್ ಬಳಿ ಈ ಘಟನೆ ನಡೆದಿದೆ.
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಉಪವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂ ಪಾಷಾ ಎಂಬುವವರ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ಇಕ್ರಂ ಪಾಷಾ, ಜುಲೈ 24ರಂದು ಹತ್ತಾರು ಕಾರುಗಳಲ್ಲಿ ಮನೆಮಂದಿಯನ್ನೆಲ್ಲಾ ಕರೆದುಕೊಂಡುವ ಬಂದು ಕೋರ್ ಏರಿಯಾದಲ್ಲಿ ಪ್ರವಾಸ ಮಾಡಿಸಿದ್ದಾರೆ. ಜೊತೆಗೆ ನಿರ್ಬಂಧಿತ ಪ್ರದೇಶದಲ್ಲಿ 25-30 ಮಂದಿ ಆಡಿದ್ದಾರೆ ಎನ್ನಲಾಗಿದೆ.
ಪ್ರವಾಸಿಗರು, ಸ್ಥಳೀಯರು ಅರಣ್ಯ ಪ್ರವೇಶಿಸಿದರೆ, ಚೆಕ್ ಪೋಸ್ಟ್ ದಾಟುವುದು 5 ನಿಮಿಷ ತಡವಾದರೆ ದಂಡ ಹಾಕುವ ಅರಣ್ಯಾಧಿಕಾರಿಗಳು ಈ ಪ್ರಕರಣ ಗೊತ್ತಿದ್ದು, ಸುಮ್ಮನಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಮನೆಮಂದಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಈ ಸಂಬಂಧ ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್, ಬಿಆರ್ಟಿಡಿಸಿಎಫ್ ಸಂತೋಷ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿತರಾದರೂ ಅವರು ಕರೆ ಸ್ವೀಕರಿಸಲಿಲ್ಲ.
ಇದನ್ನೂ ಓದಿ: ಬೀದರ್: 15 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್