ಚಾಮರಾಜನಗರ: ನರಹಂತಕ ಹುಲಿಗೆ ಅರಿವಳಿಕೆ ಮದ್ದು ನೀಡುವ ಮೂಲಕ ವ್ಯಾಘ್ರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಗುವಿನಹಳ್ಳಿಯ ಸಿದ್ದಿಕಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ಸೆರೆಹಿಡಿಯಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ನಿದ್ರೆಗೆಡಿಸಿದ್ದ ನರಹಂತಕ ಹುಲಿ ಇಬ್ಬರನ್ನು ಬಲಿ ಪಡೆದು, ಆನೆಮರಿ ಸೇರಿದಂತೆ ಹತ್ತಾರು ಜಾನುವಾರುಗಳನ್ನು ಕೊಂದು ತಿಂದಿತ್ತು. ಕಳೆದ ಬಾರಿ 30 ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ನರಹಂತಕ ಹುಲಿ ಚಳ್ಳೆಹಣ್ಣು ತಿನ್ನಿಸಿದ್ದ. ಆದರೆ, ಈ ಬಾರಿ ಅರಣ್ಯ ಇಲಾಖೆಯ ತೀವ್ರ ಕಾರ್ಯಾಚರಣೆಯಿಂದ 5 ನೇ ದಿನಕ್ಕೆ ಸೆರೆಯಾಗಿದೆ.
ಬಂಡೀಪುರ ಕ್ಯಾಂಪಿನಲ್ಲಿದ್ದ ರಾಣಾ ನಾಯಿಯನ್ನು ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಇಬ್ಬರನ್ನು ಬಲಿಪಡೆದ ವ್ಯಾಘ್ರನಿಂದಾಗಿ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದರು. ಈಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.