ಚಾಮರಾಜನಗರ:
ಬಂಡೀಪುರದ ಸುತ್ತಮುತ್ತ ಈಗ ಸಾಕಷ್ಟು ಮಳೆಯಾಗಿದೆ. ಆದರೆ, ಕೆಲ ದಿನಗಳ ಹಿಂದಷ್ಟೇ ಕಿಡಿಗೇಡಿಗಳಿಂದಾಗಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ ಸಂಪತ್ತು ಸುಟ್ಟು ಕರಕಲಾಗಿತ್ತು. ಅದಕ್ಕಾಗಿ ವನ ಸಂಪತ್ತು ಮತ್ತಷ್ಟು ಹೆಚ್ಚಿಸೋದಕ್ಕೆ ಅರಣ್ಯ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರೋಬ್ಬರಿ 3.5 ಸಾವಿರ ಕೆಜಿ ಬೀಜಗಳನ್ನು ಅರಣ್ಯ ಇಲಾಖೆ ಹಾಕಲು ಮುಂದಾಗಿದೆ. ಸದ್ಯ 400 ಎಕರೆ ಕಾಡು ಸುಟ್ಟು ಹೋದ ಜಾಗದಲ್ಲಿ ಬೀಜ ಸಿಂಪಡಣೆಗೆ ಯೋಜನೆ ಹಾಕಿಕೊಂಡಿದೆ ಅರಣ್ಯ ಇಲಾಖೆ.
ಸೆಪ್ಟೆಂಬರ್ ವೇಳೆಗೆ ಹೆಚ್ಚು ಮಳೆ ಬರುವುದರಿಂದ ಈ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ. ಈಗ ಬಿದಿರು, ಹತ್ತಿ, ಮತ್ತಿ ಹಾಗೂ ಹುಲ್ಲಿನ ಬೀಜಗಳನ್ನು ಹಾಕಲಾಗುತ್ತಿದೆ. ಮಳೆಯಾಗುತ್ತಿರುವುದರಿಂದ ಬಹುಪಾಲು ಬೀಜಗಳು ಮೊಳಕೆಯೊಡೆಯಲಿದ್ದು, ಕೆಲ ತಿಂಗಳ ಬಳಿಕ ಪ್ರಾಣಿಗಳಿಗೆ ಆಹಾರ ಆಗಲಿದೆ ಎಂದು ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಬಂಡೀಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಪ್ರಾಣಿಗಳಿಗೆ ನೀರಿನ ಸಮಸ್ಯೆಯೂ ಸದ್ಯಕ್ಕೆ ದೂರವಾಗಿದೆ.