ಚಾಮರಾಜನಗರ : ಲಾಕ್‌ಡೌನ್ ಎಫೆಕ್ಟ್ನಿಂದಾಗಿ ವಾಹನ ಸಂಚಾರ ತೀರಾ ವಿರಳವಾಗಿರುವುದರಿಂದ ರಸ್ತೆಗಳೇ ಈಗ ವನ್ಯಜೀವಿ ಸಫಾರಿ ತಾಣಗಳಂತಾಗಿವೆ. ಸ್ಥಳೀಯರಿಗೆ, ವಾಹನ ಸವಾರರಿಗೆ ಕಾಡು ಪ್ರಾಣಿಗಳು ನಿತ್ಯ ದರ್ಶನ ನೀಡುತ್ತಿವೆ.
ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ, ಇನ್ನೂ ರಾಜ್ಯದ ಕೆಲವೆಡೆ ಲಾಕ್‌ಡೌನ್ ಜಾರಿಯಿದೆ. ವಾಹನ ಸಂಚಾರ ಮೊದಲಿನಂತಾಗಲೂ ಇನ್ನೂ ಸಮಯ ಬೇಕಾದೀತು. ಪರಿಣಾಮ ರಸ್ತೆ ಬದಿಯಲ್ಲಿ ಕಾಡು ಪ್ರಾಣಿಗಳು ಕಾಣಸಿಗುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಊಟಿ, ವೈನಾಡು ರಸ್ತೆ ಬದಿಯುದ್ದಕ್ಕೂ ಈಗ ಯಾವುದೇ ಭಯವಿಲ್ಲದೇ ನೂರಾರು ಜಿಂಕೆಗಳು ವಿಹರಿಸುತ್ತಿವೆ. ಇದರಿಂದ ವಾಹನ ಸವಾರರು ಮುದಗೊಳ್ಳುತ್ತಿದ್ದಾರೆ. ಬಂಡೀಪುರ ಸಫಾರಿ ಕೇಂದ್ರದಲ್ಲಿ ಹುಲಿ ಕಾಣಸಿಗುವುದೇ ತೀರಾ ಅಪರೂಪ ಎಂಬಂತಾಗಿತ್ತು. ಆದರೀಗ ಹುಲಿ ರಸ್ತೆದಾಟುವ ದೃಶ್ಯ ಸಾಮಾನ್ಯವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ತಾಲೂಕಿನ ಮುಂಟಿಪುರದಲ್ಲಿ 4-5 ಕರಡಿಗಳು ರಸ್ತೆ ದಾಟಿ ಕಾಡು ಸೇರಿದ್ದನ್ನು ಜನ ಕಂಡಿದ್ದರು. ಬಿಳಿಗಿರಿರಂಗನ ಬೆಟ್ಟದ ಹಾದಿಯಲ್ಲಂತೂ ಆನೆಗಳ ಹಿಂಡು, ಸೀಳುನಾಯಿಗಳ ಗುಂಪು ರಸ್ತೆ ಮಧ್ಯೆದಲ್ಲೇ ನಿಲ್ಲುವ ದೃಶ್ಯ ಇತ್ತೀಚೆಗೆ ಸಾಮಾನ್ಯವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ
ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಣೆ ವಾಹನ ಬಿಟ್ಟು ಉಳಿದ ವಾಹನಗಳ ಸುಳಿವೇ ಇಲ್ಲದಿರುವುದರಿಂದ ಹಗಲಿನಲ್ಲೇ ಆನೆ ಹಿಂಡು ರಸ್ತೆಬದಿಯೇ ಬಂದು ನಿಲ್ಲುತ್ತಿವೆ. ಕಳೆದ ಮೂರು ದಿನಗಳ ಹಿಂದೆ ಆಸನೂರು ಸಮೀಪ ಆನೆ ನಡೆದದ್ದೇ ದಾರಿ ಎಂಬಂತೆ ಅರ್ಧ ತಾಸು 6 ಆನೆಗಳ ಹಿಂಡು ರಸ್ತೆ ಮಧ್ಯೆಯೇ ನಿಂತು ಲಾರಿ ಚಾಲಕರನ್ನು ಆಟ ಆಡಿಸಿದೆ. ಕೊರೊನಾ ಕಾರಣದಿಂದಾಗಿ ಮಾನವ ಮನೆಯೊಳಗೆ ಬಂಧಿಯಾಗಿದ್ದರೆ ಮನುಷ್ಯನ ಉಪಟಳ ಇಲ್ಲದಿರುವುದರಿಂದ ವನ್ಯಜೀವಿಗಳು ರಸ್ತೆಯಲ್ಲಿ ಆರಾಮಾಗಿ ವಿಹರಿಸುತ್ತಿವೆ.