ಚಾಮರಾಜನಗರ: ಮತ್ತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಭಸ್ಮವಾಗಿರುವ ಶಂಕೆ ವ್ಯಕ್ತವಾಗಿದೆ.
ಜಕ್ಕಹಳ್ಳಿ ಬೀಟ್‍ನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಮತ್ತೆ ಕುಂದಕೆರೆ ಅರಣ್ಯದಲ್ಲಿ ಬೆಂಕಿ ಬಿದ್ದು ಹುಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ. ಈ ಮೂಲಕ ಕೇವಲ ೧೦ ದಿನದ ಅಂತರದಲ್ಲಿ ೩ ಬಾರಿ ಕುಂದಕೆರೆ ಅರಣ್ಯ ಬೆಂಕಿಗೆ ತುತ್ತಾಗಿದೆ. ಹುಲ್ಲು ಹೆಚ್ಚಿರುವುದರಿಂದ ಬೆಂಕಿ ಬೀಳುತ್ತಿದ್ದಂತೆ ಎಕರೆಗಟ್ಟಲೇ ಪ್ರದೇಶಕ್ಕೆ ಬೆಂಕಿ ವ್ಯಾಪಿಸುತ್ತದೆ.
ಕುಂದಕೆರೆ ವಲಯದ ಮಾಯಾರ್ ಕಣಿವೆಗೆ ನುಗ್ಗಿದ ಬೆಂಕಿ ಕಣಿವೆಯಿಂದ ಮೇಲೆ ಬರದಂತೆ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಶ್ರಮ ಹಾಕಿದ್ದಾರೆ. ಮಾಯಾರ್ ಕಣಿವೆ ಕೆಳಗಡೆ ಹೋಗಿರುವ ಬೆಂಕಿ ಮೇಲೆ ಬಾರದಂತೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಯಾವ ಕಾರಣಕ್ಕೆ ಬೆಂಕಿ ಹಾಕುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ, ಇದೇ ತಿಂಗಳ ೧೪, ೧೮ ಮತ್ತು ಇಂದು ಬೆಂಕಿ ಹಾಕಿದ್ದಾರೆಂದು ಸಿಎಫ್ಒ ಟಿ.ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.