ಚಾಮರಾಜನಗರ: ದಸರಾ ಉಪಸಮಿತಿ ವತಿಯಿಂದ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ಹಾಕಿರುವ ಮುಖ್ಯ ವೇದಿಕೆ ಹಿಂಭಾಗ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿ ಭಾರಿ ಪ್ರಮಾಣದ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.
ವೇದಿಕೆ ಹಿಂಭಾಗ ಇಡಲಾಗಿದ್ದ ಜನರೇಟರ್ನಲ್ಲಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು ರಿಹರ್ಸಲ್ ಕೊಠಡಿಗೂ ವ್ಯಾಪಿಸಿತು ಎನ್ನಲಾಗಿದೆ.
ಇನ್ನೇನು ದೊಡ್ಡ ಪ್ರಮಾಣದಲ್ಲಿ ಹರಡಿಕೊಳ್ಳುವಷ್ಟರಲ್ಲಿ ಎಚ್ಚೆತ್ತುಕೊಂಡು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸ್ಥಳೀಯರೂ ಸಾಥ್ ನೀಡಿದ್ದರು. ಅಲ್ಲಿದ್ದ ಕಲಾವಿದರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.