ಚಾಮರಾಜನಗರ: ಮದುವೆ ಅಂದ್ರೆ ವರನಿಗೆ ಐಷಾರಾಮಿ ಕಾರು, ಬೈಕ್ ತಂದು ನಿಲ್ಲಿಸುವುದು ಸಾಮಾನ್ಯ. ಆದರೆ, ಇಲ್ಲೋರ್ವ ಯುವ ರೈತ ತನ್ನ ನೆಚ್ಚಿನ ಜೋಡೆತ್ತುಗಳಿಗೆ ವಿಶೇಷ ವೇದಿಕೆ ನಿರ್ಮಿಸಿ ತನ್ನ ಮದುವೆಯನ್ನು ವಿಶಿಷ್ಟವಾಗಿ ನೆರವೇರಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಇಂದು ವಿಶೇಷ ಮದುವೆಯೊಂದು ನಡೆದಿದ್ದು, ಕೃಷಿ ಚಟುವಟಿಕೆಗೆ ನೆರವಾಗುವ ತಮ್ಮ ಎತ್ತುಗಳನ್ನು ಮದುವೆ ಛತ್ರಕ್ಕೆ ಕರೆತಂದು ಅದಕ್ಕಾಗಿಯೇ ವೇದಿಕೆ ನಿರ್ಮಿಸಿ ಗೋಪ್ರೀತಿ ತೋರುವ ಮೂಲಕ ಮದುವೆ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರೊಟ್ಟಿಗೆ ತೊರವಳ್ಳಿ ಗ್ರಾಮದ ಯೋಗಿತಾ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭಕ್ಕೆ ತಾವು ಸಾಕಿದ ಎತ್ತುಗಳನ್ನು ಕರೆತಂದು ಅವುಗಳು ಕೂಡ ವಿವಾಹಕ್ಕೆ ಸಾಕ್ಷೀಕರಿಸಬೇಕು ಎಂಬ ವರನ ಆಸೆಯನ್ನು ಇಲ್ಲ ಎನ್ನದ ಕುಟುಂಬಸ್ಥರು ಎತ್ತುಗಳನ್ನು ಸಿಂಗರಿಸಿ- ಅದಕ್ಕಾಗಿ ವೇದಿಕೆಯನ್ನು ನಿರ್ಮಿಸಿ ವಧು - ವರರಿಗೆ ಜೋಡೆತ್ತುಗಳಿಂದ ಆಶೀರ್ವಾದವನ್ನು ಕೊಡಿಸಿ ವಿಶೇಷವಾಗಿ ಮದುವೆ ನಡೆಸಿದ್ದಾರೆ.
'ಎತ್ತುಗಳು ಎರಡು ಲಕ್ಷ ರೂ. ಮೌಲ್ಯದ್ದಾಗಿದ್ದು, ಅದರಿಂದಲೇ ಕೃಷಿ ಚಟುವಟಿಕೆ ನಡೆಸುತ್ತೇವೆ. ಮದುವೆ ಸಮಾರಂಭಕ್ಕೆ ಎತ್ತುಗಳನ್ನು ಕರೆತರೋಣ ಎಂದು ಪುತ್ರ ಮಹೇಶ್ ಆಸೆ ಪಟ್ಟಿದ್ದರಿಂದ ಛತ್ರಕ್ಕೆ ಕರೆತಂದೆವು' ಎಂದು ವರನ ತಂದೆ ಬಸವರಾಜಪ್ಪ ತಿಳಿಸಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿದ ಯುವಕ: 'ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಯುವಕನೊಬ್ಬ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಾನು ಸಾಕಿದ ಎತ್ತುಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವುದು ಶ್ಲಾಘನೀಯ. ವ್ಯವಸಾಯದಿಂದ ವಿಮುಖರಾಗುವವರು ಇವರನ್ನು ನೋಡಿ ಕಲಿಯಬೇಕು ಎಂದು' ಸ್ಥಳೀಯರಾದ ಲಿಂಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
ನೆನಪಿನಲ್ಲಿ ಉಳಿಯುವ ಜೀವನದ ಘಳಿಗೆ: ಮದುವೆ ಎಂದರೆ ನೆನಪಿನಲ್ಲಿ ಉಳಿಯುವ ಜೀವನದ ಘಳಿಗೆಯಾಗಿದ್ದು, ಅದನ್ನು ಮತ್ತಷ್ಟು ಸ್ಮರಣೀಯ ಮಾಡಿಕೊಂಡಿರುವ ಯುವ ರೈತ ಮಹೇಶ್ ಅವರ ಗೋಪ್ರೀತಿ ಮಾದರಿಯಾಗಿದೆ.
ಓದಿ: ಫಾರ್ಮಾಸಿಸ್ಟ್ - ನರ್ಸ್ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿ!