ಕೊಳ್ಳೇಗಾಲ : ಪ್ರಿಯತಮೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿರುವ ಬಗ್ಗೆ ಪ್ರಶ್ನಿಸಿದ ಪ್ರಿಯತಮ ಹಾಗೂ ಆತನ ಸಹೋದರರಿಗೆ ಯುವತಿಯ ಅಣ್ಣ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಜಾಗೇರಿಯಲ್ಲಿ ನಡೆದಿದೆ.
ಜಾಗೇರಿ ಗ್ರಾಮದ ಜಾರ್ಜ್ ಪ್ರಕಾಶ್ ಹಾಗೂ ಈತನ ಸಹೋದರಾರದ ಪೀಟರ್ ಜಾನ್ ಪಾಲ್, ಜೊಸೆಫ್ ಸ್ಟಾಲಿನ್ ಹಾಗೂ ಅದೇ ಗ್ರಾಮದ ಜಾನ್ಸನ್ ಸಂತೋಷ್ ಹಲ್ಲೆಗೊಳಗಾದವರು. ಜಾಗೇರಿ ಗ್ರಾಮದ ಥಾಮಸ್ ಎಂಬವರ ಮಗಳು ಮೇರಿ ಸ್ನೇಹಾ ಹಾಗೂ ಜಾರ್ಜ್ ಪ್ರಕಾಶ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಅದೇ ಗ್ರಾಮದ ಜಯಶೀಲ್ ಎಂಬವನ ಜೊತೆ ಮೇರಿ ಸ್ನೇಹಾಳ ನಿಶ್ಚಿತಾರ್ಥ ಮಾಡಲು ಮನೆಯವರು ಮುಂದಾಗಿದ್ದರು. ಈ ಕುರಿತು, ಜಾರ್ಜ್ ಪ್ರಕಾಶ್ ಹಾಗೂ ಸಹೋದರರು ಪ್ರಶ್ನಿಸಿದಾಗ, ಯುವತಿಯ ಅಣ್ಣ ಐಜಾಕ್ ರಾಬಿನ್ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಲ್ವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಆರೋಪಿ ಐಜಾಕ್ ರಾಬಿನ್ನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.