ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ತಮಿಳುನಾಡಿಗೆ ಸಂಪರ್ಕಿಸುವ ರಸ್ತೆಯನ್ನು ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಕೆಎಸ್ಆರ್ಟಿಸಿ, ಎಸ್ಬಿಐ ಮತ್ತು ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಎಸ್ಬಿಐ ಬ್ಯಾಂಕ್ ಕೂಡಲೇ ಸ್ಥಳಿಯ ರೈತರಿಗೆ ಬೆಳೆ ಪರಿಹಾರ ನೀಡಬೇಕು, ಶ್ರೀ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯರಿಗೆ ನೌಕರಿಯನ್ನು ನೀಡಬೇಕು ಮತ್ತು ಮೀಸಲು ನಿಯಮ ಪಾಲಿಸಬೇಕು. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಮತ್ತು ಕುಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಮರ್ಪಕ ರಸ್ತೆ ನಿರ್ಮಿಸಿಕೊಟ್ಟರೇ ಬಸ್ ಸೌಲಭ್ಯ ನೀಡುವುದಾಗಿ ಕೆಎಸ್ಆರ್ಟಿಸಿ ಉಪವಿಭಾಗಧಿಕಾರಿ ಭರವಸೆ ನೀಡಿದ್ದು , ಎಸ್ ಬಿಐ ಮ್ಯಾನೇಜರ್ ರೈತರಿಗೆ ಸೂಕ್ತ ಸಾಲ ಮತ್ತು ಬೆಳೆ ಪರಿಹಾರ ನೀಡುವುದಾಗಿಯು, ವಿಳಂಬ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದರು.