ಚಾಮರಾಜನಗರ: ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ ಉಯಿಲನತ್ತ ಗ್ರಾಮದಲ್ಲಿ ಪದೇ ಪದೆ ಕೆಟ್ಟು ನಿಲ್ಲುತ್ತಿರುವ ಟ್ರಾನ್ಸ್ಫಾರ್ಮರ್ನಿಂದಾಗಿ ಕಳೆದ 10 ದಿನದಿಂದ ಬೆಳೆಗೆ ನೀರು ಹಾಯಿಸಲಾಗದೇ ರೈತರು ಕೈ ಹೊತ್ತು ಕುಳಿತಿದ್ದಾರೆ.
10 ದಿನಗಳ ಹಿಂದೆ ಗ್ರಾಮದ ವಿದ್ಯುತ್ ಪರಿವರ್ತಕ ಸುಟ್ಟಿದ್ದು, ಸೆಸ್ಕ್ ಸಿಬ್ಬಂದಿ ನೀಡಿದ್ದ ಮತ್ತೊಂದು ಟಿಸಿಯು 4 ತಾಸಿನಲ್ಲಿ ಭಸ್ಮವಾಗಿದೆ. ಇದರಿಂದಾಗಿ ಬೆಳೆಗೆ ನೀರು ಹಾಯಿಸಲಾಗದೇ ರೈತರು ಕಂಗಲಾಗಿದ್ದಾರೆ. ಎರಡು ದಿನಗಳಲ್ಲಿ ಹಿರಿಯ ಅಧಿಕಾರಿಗಳು ಸರ್ವೇ ನಡೆಸಿ ಹೊಸ ಟಿಸಿ ಕೊಡುತ್ತಾರೆ ಎಂದು ಸಿಬ್ಬಂದಿ ನೀಡುವ ಸಬೂಬಿನಿಂದ ರೈತರು ಬೇಸತ್ತು ಹೋಗಿದ್ದಾರೆ.
ಬೆಳ್ಳುಳ್ಳಿ, ಆಲೂಗೆಡ್ಡೆ ಸೇರಿದಂತೆ ಇತರ ಬೆಳೆಗಳು ಒಣಗುತ್ತಿರುವುದರಿಂದ ಆತಂಕಕ್ಕೆ ಒಳಗಾಗಿರುವ ರೈತರು, ಸಂಜೆ ವೇಳೆಗೆ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಲ ಮಾಡಿ ವ್ಯವಸಾಯ ಮಾಡುತ್ತಿದ್ದು, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಷ್ಟ ಅನುಭವಿಸುವಂತಾಗಿದೆ. ನೀರಿದ್ದರೂ ಬೆಳೆಗೆ ಹಾಯಿಸಲಾಗದ ಪರಿಸ್ಥಿತಿ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳದೇ ಮತ್ತೇನು ಮಾಡಲು ಸಾಧ್ಯ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.