ಕೊಳ್ಳೇಗಾಲ: ಜಮೀನಿಗೆ ನೀರು ಬಿಡುತ್ತಿಲ್ಲವೆಂದು ಬೇಸತ್ತು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.
ರೈತ ಮಹದೇವಸ್ವಾಮಿ(60) ಮೃತ ರೈತ. ಮಹದೇವಸ್ವಾಮಿ ಮತ್ತು ಈತನ ತಮ್ಮನ ನಡುವೆ ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಗಲಾಟೆ ನಡೆಯುತ್ತಿತು. ಈ ಹಿನ್ನೆಲೆಯಲ್ಲಿ ಬೇಸತ್ತು, "ನನ್ನ ಜೀವನೋಪಾಯಕ್ಕೆ ಇದ್ದ ಸ್ವಲ್ಪ ಜಮೀನಿಗೆ ನೀರು ಬಿಡದೆ ನನ್ನ ತಮ್ಮ ಹಾಗೂ ಆತನ ಹೆಂಡತಿ ಕಿರುಕುಳ ನೀಡುತ್ತಿದ್ದಾರೆ" ಎಂದು ಪತ್ರ ಬರೆದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಬಳಿಕ ಕುಟುಂಬಸ್ಥರು ತಕ್ಷಣ ಆತನನ್ನು ಪಟ್ಟಣದ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆಗಾಗಿ ಚಾಮರಾಜನಗರಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅಲ್ಲಿಂದ ಮೈಸೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಮೃತದೇಹವನ್ನು ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ತಂದಿರಿಸಿ ಠಾಣೆಗೆ ಆಗಮಿಸಿದ ಮಹದೇವಸ್ವಾಮಿ ಪತ್ನಿ ಶಿವಮ್ಮ ದೂರು ನೀಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.