ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿನ ಕೇರಳ ಗಡಿ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ವಂಚಿಸಿದ್ದ ನಾಲ್ವರು ಕೇರಳಿಗರ ವಿರುದ್ಧ ಗುಂಡ್ಲುಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೇರಳದ ಕೋಝಿಕೋಡ್ ನಿವಾಸಿಗಳಾದ ವಿಜಯ್, ಜಯಪ್ರಕಾಶ್, ಸಂತೋಷ್ ಹಾಗೂ ವಿಜಯನ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 1860 ರ ಅಡಿ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದೇ SRFID ಬಳಸಿಕೊಂಡು ಈ ನಾಲ್ವರು ಮೂರು ಕೋವಿಡ್ ನೆಗೆಟಿವ್ ರಿಪೋರ್ಟ್ಗಳನ್ನು ಮನೆಯಲ್ಲೇ ಪ್ರಿಂಟ್ ಮಾಡಿಕೊಂಡು ಬಂದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಬರಬೇಕಾದರೆ, ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ಹಿನ್ನೆಲೆ ಕೆಲವರು ಕಳ್ಳಾಟ ಆಡಲು ಆರಂಭಿಸಿದ್ದಾರೆ.
ಚಾಮರಾಜನಗರದಲ್ಲಿ ಒಂದೇ ದಿನ 464 ಕೇಸ್: ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಂಡಿದ್ದು, ಇಂದು ಹೊಸದಾಗಿ 464 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1388 ಕ್ಕೆ ಏರಿಕೆಯಾಗಿದೆ.
ಇಂದಿನ ಹೊಸ ಪ್ರಕರಣಗಳಲ್ಲಿ ಚಾಮರಾಜನಗರದ ಕೇಂದ್ರಿಯ ವಿದ್ಯಾಲಯದ ನಾಲ್ವರು ಶಿಕ್ಷಕರು ಸೇರಿದಂತೆ ಜಿಲ್ಲೆಯ 10 ಮಂದಿ ಶಿಕ್ಷಕರುಗಳು, 20 ಮಂದಿ ವಿದ್ಯಾರ್ಥಿಗಳು ಸೇರಿ 40 ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ. ಚಾಮರಾಜನಗರ ನಗರಸಭೆ ಆರೋಗ್ಯ ನಿರೀಕ್ಷಕ ಸೇರಿದಂತೆ 4 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ: ಕೋವಿಡ್ 3ನೇ ಅಲೆ ನಡುವೆ ಶಾಲೆಗಳ ಪುನಾರಂಭ... ಸೋಮವಾರದಿಂದ 1-12ನೇ ತರಗತಿ ಮಕ್ಕಳು ಶಾಲೆಗೆ!
ಇಂದು 86 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 877 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. ಇಂದು 3 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ನಾಲ್ಕು ಸಾವಿರ ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ನಾಲ್ಕು ಸಾವಿರ ಮಂದಿಗೆ ಲಸಿಕೆ ಕೊಡಲಾಗಿದ್ದು, ಇವರಲ್ಲಿ 278 ಬೂಸ್ಟರ್ ಡೋಸ್, 3,724 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ