ಚಾಮರಾಜನಗರ: ಹಸಿರು ಝೋನ್ ನಲ್ಲಿರುವ ಜಿಲ್ಲೆಯನ್ನು ಹೀಗೆ ಮುಂದುವರೆಸಲು ಜಿಲ್ಲಾಡಳಿತ 'ಎವರ್ ಗ್ರೀನ್ ಚಾಮರಾಜನಗರ ಅಭಿಯಾನ' ಮಾಡಲು ಮುಂದಾಗಿದೆ.
ಹೊರ ರಾಜ್ಯಗಳಿಂದ ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಗ್ರಾಮ ಮಟ್ಟದಲ್ಲಿ ಗ್ರಾಮ ಕಾರ್ಯಪಡೆ ಕ್ರಿಯಾಶೀಲಗೊಳಿಸಿ ನಗರ ಮತ್ತು ಪಟ್ಟಣಗಳಲ್ಲಿ ಹೊಸದಾಗಿ ಕಾರ್ಯಪಡೆ ರಚಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಮನೆ ಮನೆ ಭೇಟಿ, ಆರೋಗ್ಯ ವಿಚಾರಣೆ, ಕರ ಪತ್ರಗಳ ಮೂಲಕ ನಿರಂತರ ಜಾಗೃತಿ ಮೂಡಿಸುವುದು. ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ರೂಪಿಸಿ ಆ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಪಾಲಿಸಲು ಜಾಗೃತಿ ರೂಪಿಸಲಾಗುತ್ತಿದೆ.
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಆರೋಗ್ಯಾಧಿಕಾರಿ ತಂಡವಾಗಿ ಪ್ರತಿ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡುವುದು. ಸಾರ್ವಜನಿಕರಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವುದು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತಾಲೂಕಿನ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸುವುದು. ಸಾರ್ವಜನಿಕರು ಹಾಗೂ ವಾಹನಗಳ ತಪಾಸಣೆ, ವೈದ್ಯಕೀಯ ಸ್ಕ್ರೀನಿಂಗ್ ಅನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಈಗಾಗಲೇ ಡಿಸಿ ಸೂಚಿಸಿದ್ದು, ಕೊರೊನಾ ಜಿಲ್ಲೆಗೆ ಕಾಲಿಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಮಾಸ್ಕ್ ಧರಿಸುವುದು, ಆಂತರ ಕಾಯ್ದುಕೊಳ್ಳುವುದು, ಸೋಪ್‍ಗಳಿಂದ ಕೈಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆಹಚ್ಚಿ ಸ್ಥಳೀಯ ವೈದ್ಯರಿಗೆ ಮಾಹಿತಿಯನ್ನು ನೀಡುವುದು. ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂಬ ನಿಟ್ಟಿನಲ್ಲಿ ಸೂಚನೆ, ನಿರ್ದೇಶನ ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ತಂಬಾಕು, ಗುಟ್ಕಾ, ಧೂಮಪಾನ ನಿಷೇಧಿಸಲಾಗಿದೆ.
ಎವರ್ ಗ್ರೀನ್ ಚಾಮರಾಜನಗರ ಅಭಿಯಾನದ ಮೂಲಕ ಕೊರೊನಾ ವಿರುದ್ಧ ಗಡಿ ಜಿಲ್ಲೆಯಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಗಡಿಜಿಲ್ಲೆಯಲ್ಲಿ ಕೊರೊನಾ ಕಾಡದಂತೆ ಪ್ರತಿಯೊಬ್ಬರೂ ಕೊರೊನಾ ಯೋಧರೇ ಎಂದು ಡಿಸಿ ತಿಳಿಸಿದ್ದಾರೆ.