ಚಾಮರಾಜನಗರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿರುವ ಸಿಎಂ ಯಡಿಯೂರಪ್ಪ ಅವರ ಸಭಾ ಕಾರ್ಯಕ್ರಮದಲ್ಲಿ ಸಭಿಕರಿಲ್ಲದೆ ಕುರ್ಚಿಗಳು ಖಾಲಿ ಖಾಲಿ ಹೊಡೆದವು.
ಕೋವಿಡ್-19 ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಕೇವಲ 200 ಜನರಿಗಷ್ಟೇ ಆಹ್ವಾನ ನೀಡಲಾಗಿತ್ತು. ಆದರೆ 100 ಮಂದಿಗೂ ಕಡಿಮೆ ಸಭಿಕರು ಹಾಜರಾಗಿದ್ದು, ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಆಹ್ವಾನ ಪತ್ರ ಇದ್ದವರಿಗಷ್ಟೇ ಮಾತ್ರ ಪ್ರವೇಶ ನೀಡುತ್ತಿದ್ದು, ಸಭಾಭವನ ಬಿಕೋ ಎನ್ನಲು ಕಾರಣವಾಯಿತು.
ವೇದಿಕೆಯಲ್ಲಿ ಸುತ್ತೂರು ಮತ್ತು ಸಾಲೂರು ಶ್ರೀಗಳು, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸುರೇಶ್ ಕುಮಾರ್ ಇನ್ನಿತರ ಜನಪ್ರತಿನಿಧಿಗಳಿದ್ದರು. ಇದಕ್ಕೂ ಮುನ್ನ ನಾಗಮಲೆ ಭವನದಲ್ಲಿ ಸಿಎಂ ಯಡಿಯೂರಪ್ಪ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಸಂವಿಧಾನ ದಿನ ಆಚರಿಸಿದರು.