ಚಾಮರಾಜನಗರ: ಕಬ್ಬು ತುಂಬಿದ ಲಾರಿಗಳನ್ನು ತಡೆದು ಕಬ್ಬಿನ ಜಲ್ಲೆಗಳನ್ನು ಗಜಪಡೆ ಸ್ವಾಹ ಮಾಡುವುದು ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿದೆ. ಆನೆಗಳು ಭರ್ಜರಿ ಊಟ ಸವಿದರೆ, ವಾಹನ ಸವಾರರು ಸೆಲ್ಫಿ ಹುಚ್ಚಾಟ ತೋರುತ್ತಿದ್ದಾರೆ.
ತಮಿಳುನಾಡು - ಕರ್ನಾಟಕ ಗಡಿಯಾದ ಕಾರೇಪಾಲಂ ಸಮೀಪ ಮಂಗಳವಾರ ಸಂಜೆ ಮರಿ ಸೇರಿದಂತೆ ಮೂರು ಆನೆಗಳು ಕಬ್ಬು ತುಂಬಿದ ಲಾರಿಯನ್ನು ತಡೆದು ಕಬ್ಬು ತಿನ್ನುತ್ತಿರುವ ವಿಡಿಯೋವನ್ನು ವಾಹನ ಸವಾರರೊಬ್ಬರು ಸೆರೆ ಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ.
ಟ್ರಾಫಿಕ್ ಜಾಂ:
ಕಾರೇಪಾಲಂನ ಈ ಪ್ರದೇಶ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರಲಿದ್ದು, ಈ ಹಿಂದೆ ಕೇವಲ ರಾತ್ರಿ ವೇಳೆಯಲ್ಲಷ್ಟೇ ಗಜಪಡೆ ರಸ್ತೆಗಿಳಿಯುತ್ತಿದ್ದವು. ಆದರೆ, ಮರಿ ಜೊತೆ ಇರುವ ಎರಡು ಆನೆಗಳು ಹಗಲು ಹೊತ್ತಿನಲ್ಲೇ ಲಾರಿ ತಡೆದು ಕಬ್ಬು ಸ್ವಾಹ ಮಾಡುತ್ತಿದ್ದು, ನಿತ್ಯ ಅರ್ಧ-ಮುಕ್ಕಾಲು ತಾಸು ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಮೂರು ಆನೆಗಳು ಕಬ್ಬು ತಿನ್ನುತ್ತಿರುವ ವಿಡಿಯೋ, ಪೋಟೋ ಸೆರೆಹಿಡಿಯಲು ವಾಹನಗಳನ್ನು ನಿಲ್ಲಿಸಿ ಸವಾರರು ಹುಚ್ಚಾಟ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕಾಡೊಳಗೆ ಹೋಗದ ಆನೆಗಳು :
ಈ ಕುರಿತು ಸ್ಥಳೀಯರೊಬ್ಬರು ಈಟಿವಿ ಭಾರತದೊಂದಿಗೆ ಮಾತನಾಡಿ, ಮರಿಯೊಂದಿಗೆ ಇರುವ ಎರಡು ಆನೆಗಳು ಕಾಡಿನೊಳಗೆ ಹೋಗುತ್ತಿಲ್ಲ. ರಸ್ತೆಬದಿಯಲ್ಲೇ 10-15 ಕಿಮೀ ಆ ಬದಿಯಿಂದ ಈ ಬದಿಗೆ ಓಡಾಡುತ್ತಿರುತ್ತವೆ, ಕಬ್ಬು ತುಂಬಿದ ಲಾರಿ ಬಂದರೆ ತಡೆದು ಮರಿಗೂ ಕೊಟ್ಟು ತಾನು ತಿನ್ನಲಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೈಕ್ ಹಾಗೂ ಕಾರಿನಲ್ಲಿ ಸಂಚರಿಸುವವರು ಆನೆಗಳ ಭಯದಿಂದಲೇ ಓಡಾಡಬೇಕಿದೆ, ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬೇಕಿದೆ. ಜೊತೆಗೆ, ಲಾರಿ ಚಾಲಕರು ರಸ್ತೆಬದಿಯಲ್ಲಿ ಕಬ್ಬು ಬಿಸಾಡಿ ಹೋಗದಂತೆ ಸೂಚಿಸಬೇಕಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಪ್ರಸ್ತಾಪಿಸಿದ 'ಬಾಕಾಹು'ಗೆ ಬಹುಬೇಡಿಕೆ: ದೇಶವ್ಯಾಪಿ ಕ್ರಾಂತಿಯ ಕಂಪು