ಚಾಮರಾಜನಗರ: ಎರಡು ದಿನದ ಹಿಂದೆಯಷ್ಟೇ ಗಡಿ ಭಾಗದಲ್ಲಿ ಜೋಡಿ ಆನೆ ಸತ್ತ ಘಟನೆ ಮಾಸುವ ಮುನ್ನವೇ ಹನೂರು ತಾಲೂಕಿನ ಎಲ್ಲೆಮಾಳ ಸಮೀಪದ ಬಿ.ಎಂ.ಹಳ್ಳಿಯಲ್ಲಿ ಮತ್ತೊಂದು ಆನೆ ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಸಣ್ಣಮಲ್ಲಯ್ಯ ಎಂಬಾತ ತನ್ನ ಜಮೀನಿಗೆ ಹಾಕಿದ್ದ ಅಕ್ರಮ ವಿದ್ಯುತ್ ತಂತಿ ತುಳಿದು ಅಂದಾಜು 20 ವರ್ಷದ ಸಲಗವೊಂದು ನಿನ್ನೆ ಮುಂಜಾನೆ ಸಾವನ್ನಪ್ಪಿದೆ. ಬೆಳೆದಿದ್ದ ಮೆಕ್ಕೆಜೋಳ ರಕ್ಷಿಸಿಕೊಳ್ಳಲು ಹಾಕಿದ್ದ ಅಕ್ರಮ ವಿದ್ಯುತ್ ತಂತಿಯಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ.
ಸಲಗದ ಬಾಯಲ್ಲಿ ಮೆಕ್ಕೆಜೋಳದ ತೆನೆಯೊಂದು ಇದ್ದು, ಜೋಳ ತಿನ್ನುತ್ತಲೇ ಮೃತಪಟ್ಟಿರುವುದು ಪ್ರಾಣಿಪ್ರಿಯರ ಮನ ಕಲಕುವಂತಿದೆ. ಸದ್ಯ, ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.