ಚಾಮರಾಜನಗರ : ಮಳೆ ಆರ್ಭಟದಿಂದ ಭೋರ್ಗರೆದು ಧುಮ್ಮಿಕ್ಕುತ್ತಿರುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಸುತ್ತಮುತ್ತಲೂ ಆನೆ ಹಾವಳಿ ವಿಪರೀತವಾಗಿದೆ. ಸಂಜೆ 7 ಗಂಟೆ ಆದರೆ ಸಾಕು ಆನೆಯೊಂದು ಜಲಪಾತದ ವೀಕ್ಷಣಾ ಆವರಣಕ್ಕೆ ಬಂದು ನಿಲ್ಲುತ್ತಿದೆ.
ನಿತ್ಯ ಮಕ್ಕಳ ಉದ್ಯಾನದ ಮೇಲೆ ದಾಳಿ ಮಾಡುತ್ತಿದೆ. ಅಲ್ಲದೇ, ಜಾರುಬಂಡೆ, ತೂಗುಯ್ಯಾಲೆ ಸೇರಿದಂತೆ ಮಕ್ಕಳು ಆಟವಾಡುವ ಬಹುತೇಕ ಉಪಕರಣಗಳನ್ನು ಮುರಿದು ಹಾಕಿದೆ.
ಈ ಹಿಂದೆ ಭರಚುಕ್ಕಿ ಜಲಪಾತ ಆವರಣದಲ್ಲಿ ಚಿರತೆಯೊಂದು ಆಗಾಗ ಭೇಟಿ ಕೊಟ್ಟು ಪ್ರವಾಸಿಗರನ್ನು ಆತಂಕಕ್ಕೆ ದೂಡಿತ್ತು. ಈಗ ಒಂಟಿ ಸಲಗವೊಂದು ನಿತ್ಯ ಬರುವ ಮೂಲಕ ಸಾಧನ-ಸಲಕರಣೆಗಳನ್ನ ಪುಡಿ ಪುಡಿ ಮಾಡುತ್ತಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ : ಪೂರ್ವ ಮುಂಗಾರು ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ತಾಲೂಕಿನ ಭರಚುಕ್ಕಿ ಜಲಪಾತ ಧುಮ್ಮಿಕ್ಕುತ್ತಿದ್ದು, ಹಾಲಿನ ನೊರೆಯಂತೆ ಬೀಳುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೀಗಾಗಿ, ಕಬಿನಿ, ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಇದೆ. ಈ ಜಲಾಶಯಗಳಿಂದ ಬರುವ ಅಲ್ಪಸ್ವಲ್ಪ ನೀರಿನ ಜೊತೆಗೆ ಕೆರೆ-ಕಟ್ಟೆ, ಹಳ್ಳದ ನೀರು ಕಾವೇರಿ ನದಿಗೆ ಸೇರುತ್ತಿದೆ. ಇದರಿಂದ ನದಿ ನೀರಿನ ಹರಿವು ಬಿರುಸುಗೊಂಡಿದ್ದು, ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಧುಮ್ಮಿಕ್ಕುವ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಓದಿ: ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಶೈಲಿ ಪತ್ತೆ: ಮೇ 25ಕ್ಕೆ ತಾಂಬೂಲ ಪ್ರಶ್ನೆ