ಚಾಮರಾಜನಗರ: ಮಾರ್ನಿಂಗ್ ವಾಕ್ನಿಂದಲೇ ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಮತಬೇಟೆ ಆರಂಭ ಮಾಡಿದ್ದು, ವಾಯುವಿಹಾರಿಗಳು, ಟೀ ಅಂಗಡಿಗಳಿಗೆಲ್ಲ ತೆರಳಿ ಮತ ಪ್ರಚಾರ ನಡೆಸಿದ್ದಾರೆ. ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ, ಎದುರಾದ ಬಾಲಕನೊಬ್ಬ ಸಿಎಂ ಆಗೊಕೆ ಏನ್ ಮಾಡ್ಬೇಕು ಅಂತಾ ಸೋಮಣ್ಣ ಅವರನ್ನು ಪ್ರಶ್ನಿಸಿದ್ದಾನೆ.
ಅಚ್ಚರಿಗೊಂಡ ಸೋಮಣ್ಣ, ನೀನು ಏನು ಮಾಡ್ಬೇಡ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲ ಲೆಕ್ಕ ಇಲ್ಲ ನೀನೆ ದೊಡ್ಡ ಸಿಎಂ, ಚೆನ್ನಾಗಿ ಓದು, ಸ್ಪೋರ್ಟ್ಸ್ ಆಕ್ಟಿವಿಟಿಯಲ್ಲಿರು ಬಾಕಿದೆಲ್ಲಾ ಬಿಟ್ಬಿಡು. ನಿನ್ನ ಹಣೆಯಲ್ಲಿದ್ರೆ ಬರ್ತೀಯಾ ಹೋಗು ಎಂದು ಸೋಮಣ್ಣ ಹೇಳಿದರು. ಮುಂದುವರಿದು ಬಿಜೆಪಿ ಮುಂಖಡರಿಗೆ ಕರ್ತವ್ಯದ ಕುರಿತು ತಿಳಿ ಹೇಳಿದರು. ನನಗೆ ಪಾರ್ಟಿಯೇ ತಾಯಿ, ಅಷ್ಟಕ್ಕೆ ಇಷ್ಟಕ್ಕೆ ಅಲ್ಲ. ನೀನೊಬ್ಬ ಬದಲಾವಣೆಯಾಗುವ. ಬದಲಾವಣೆಯಾಗದಿದ್ದರೆ ನಿಮಗೆ ನಷ್ಟವಾಗೋದು.
ಒಳ್ಳೆಯದಕ್ಕೆ ನಾನು ಪ್ರಾಣ ಬೇಕಾದರೂ ಕೊಡುತ್ತೇನೆ. ಕೆಟ್ಟವರಿಗೆ ಮಾತ್ರ ಬಿಡೋದಿಲ್ಲ. ಹಾಗಾಗಿ ದಯಮಾಡಿ ಕೆಲಸ ಮಾಡಿ. 10 ವರ್ಷದಿಂದ ಅವರೇನೂ ಮಾಡಲಿಲ್ಲ ಎಂದು ಆರೋಪಿಸುತ್ತೆವೆ ಹೌದು ಸರಿ ಹಾಗಾದರೆ ನಾವೇನೂ ಕೆಲಸ ಮಾಡಿದ್ದೀವಿ. ನಮ್ಮ ಸರ್ಕಾರವಿದ್ದಾಗಲೂ ಏನು ಮಾಡಿಲ್ಲ ಎಂದು ಸ್ಟೇಡಿಯಂ ಅವ್ಯವಸ್ಥೆ ನೋಡಿ ಬಿಜೆಪಿ ಮುಖಂಡರಿಗೆ ಸೋಮಣ್ಣ ಚಾಟಿ ಬೀಸಿದರು. ಇನ್ನು, ಎರಡನೇ ದಿನದ ಮತಪ್ರಚಾರ ನಡೆಸುತ್ತಿರುವ ಸಚಿವ ಸೋಮಣ್ಣ ಇಂದು ಕೂಡ 18 ಕ್ಕೂ ಹೆಚ್ಚು ಊರುಗಳಿಗೆ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿ ಮಾಡುತ್ತಿದ್ದಾರೆ.
ಹಳೇ ಮೈಸೂರಲ್ಲಿ ಇಂದಿನಿಂದ ವಿಜಯೇಂದ್ರ ಪ್ರಚಾರ: ಬಿಜೆಪಿ ಲಿಂಗಾಯತರ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಹೊತ್ತಿನಲ್ಲೇ ಲಿಂಗಾಯತ ಸಮುದಾಯದ ಯುವನಾಯಕ ಬಿ.ವೈ. ವಿಜಯೇಂದ್ರ ಹಳೇ ಮೈಸೂರಿನಲ್ಲಿ ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.
ಲಿಂಗಾಯತ ಸಮುದಾಯದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಬಿ.ವೈ. ವಿಜಯೇಂದ್ರ ಇಂದಿನಿಂದ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಆರಂಭಿಸುತ್ತಿದ್ದು, ಮೊದಲಿಗೆ ಚಾಮರಾಜನಗರ ಜಿಲ್ಲೆಯ ಹನೂರು ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಹನೂರಿನಲ್ಲಿ ಒಂದು ಕಡೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮೂರು ಸ್ಥಳಗಳಲ್ಲಿ ಸಮಾವೇಶ ನಡೆಸಲಿರುವ ವಿಜಯೇಂದ್ರ ಬಳಿಕ ಮೈಸೂರಿನ ಕೃಷ್ಣರಾಜ ಕ್ಷೇತ್ರ ಹಾಗೂ ವರುಣಾ, ಟೀ. ನರಸೀಪುರ ಕ್ಷೇತ್ರಗಳಲ್ಲಿ ಮತ ಶಿಕಾರಿ ನಡೆಸಲಿದ್ದಾರೆ.
ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ವಿಜಯೇಂದ್ರ ಸಂಚಾರ ಮಾಡಲಿದ್ದು ಹಳೇ ಮೈಸೂರು ವಶ ಮಾಡಿಕೊಳ್ಳುವ ಬಿಜೆಪಿ ರಣತಂತ್ರಕ್ಕೆ ವಿಜಯೇಂದ್ರ ಈಗ ಎಂಟ್ರಿಯಾಗಿದ್ದಾರೆ. ಕಾಂಗ್ರೆಸ್ ಆರೋಪಗಳ ನಡುವೆ ವಿಜಯೇಂದ್ರ ಬರುತ್ತಿರುವುದು ರಾಜಕೀಯ ಜಿದ್ದಾಜಿದ್ದಿ ಮತ್ತಷ್ಟು ಹೆಚ್ಚಲಿದೆ. ಇನ್ನು, ಸಚಿವ ಸೋಮಣ್ಣ ಎರಡು ದಿನ ಚಾಮರಾಜನಗರದಲ್ಲಿ ಬಳಿಕ ಎರಡು ದಿನ ವರುಣಾದಲ್ಲಿ ಪ್ರಚಾರ ನಡೆಸಲಿದ್ದು, ಅದಾದ ನಂತರ ಬೆಂಗಳೂರಿನ ಗೋವಿಂದರಾಜನಗರಕ್ಕೂ ತೆರಳಿ ಪ್ರಚಾರ ಮಾಡುವ ಟಾಸ್ಕ್ ಕೊಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಮಿಂಚಿನ ಸಂಚಾರ: ಕಮಲದ ಕಲಿಗಳ ಪರ ಬಿರುಸಿನ ಪ್ರಚಾರ