ಚಾಮರಾಜನಗರ: ಚಾಮರಾಜನಗರ ತಾಲೂಕಿನ ಎಚ್.ಮೂಕಹಳ್ಳಿ ಗ್ರಾಮಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ಖಿನ್ನತೆ ಹಾಗೂ ಇನ್ನಿತರ ಕಾರಣದಿಂದ ಒಂದೇ ಮನೆಯ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲಿ ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ಸಮಸ್ಯೆಗಳು ತಲೆದೋರುವುದು ಸಹಜ. ಇದನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಮಹಾದೇವಸ್ವಾಮಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು ದುರದೃಷ್ಟಕರ ಎಂದು ಕಂಬನಿ ಮಿಡಿದರು.
ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕುಟುಂಬದ ಹಿರಿಯ ಮಗಳಿಗೆ ಸರ್ಕಾರಿ ಉದ್ಯೋಗ ಕೊಡುವ ಜೊತೆಗೆ ಅವರ ಮನೆಯನ್ನು ದುರಸ್ತಿ ಪಡಿಸಿ ಜಮೀನಿನಲ್ಲಿ ಕೊಳವೆ ಬಾವಿ ಸೌಲಭ್ಯವನ್ನು ಕಲ್ಪಿಸಿ ಜೀವನೋಪಾಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.