ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಗೆ ಕೋವಿಡ್-19 ದೃಢವಾದ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳ ಮುಖಂಡರಿಗೆ ಹಾಗೂ ಅಧಿಕಾರಗಳಿಗೆ ಕೊರೊನಾ ಆತಂಕ ಮನೆ ಮಾಡಿದೆ.
ಕಳೆದ ಶನಿವಾರವಷ್ಟೇ ದುರ್ಗಮ ಹಾದಿಯ ಕಾಡೊಳಗಿನ ಗ್ರಾಮಗಳಾದ ಮೆದಗನಾಣೆ, ಇಂಡಿಗನತ್ತ, ತುಳಸಿಗೆರೆ, ಪಡಸಲನತ್ತಕ್ಕೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ದಿನವಿಡೀ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಅಲ್ಲದೇ ಅಧಿಕಾರಿಗಳ ಸಭೆ ನಡೆಸಿದ್ದರು. ಈಗ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿರುವುದರಿಂದ ಅಧಿಕಾರಿಗಳಿಗೆ, ಮುಖಂಡರಿಗೆ ಕೊರೊನಾ ಆತಂಕ ಮನೆ ಮಾಡಿದೆ.
ಈ ಕುರಿತು, ಈಟಿವಿ ಭಾರತಕ್ಕೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಚಿವರು ದಿನವಿಡೀ ಮಾಸ್ಕ್ ಧರಿಸಿದ್ದರು ಹಾಗೂ ಊಟ ಮತ್ತು ಸಭೆ ಸಮಯದಲ್ಲೂ ಶಾರೀರಿಕ ಅಂತರ ಕಾಯ್ದು ಕೊಂಡಿದ್ದರಿಂದ ಆತಂಕದ ಅಗತ್ಯವಿಲ್ಲ, ಮುನ್ನೆಚ್ಚರಿಕೆಗಾಗಿ ನಾಳೆಯೇ ಟೆಸ್ಟ್ ಮಾಡಿಸುವುದಾಗಿ ತಿಳಿಸಿದ್ದಾರೆ.
ಇನ್ನು, ಸಚಿವರು ಮಲೆಮಹದೇಶ್ವರನ ದರ್ಶನ, ನಾಲ್ಕಾರು ಗ್ರಾಮಗಳ ಭೇಟಿ ನೀಡಿದ್ದಲ್ಲದೇ ಶನಿವಾರ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು.