ಚಾಮರಾಜನಗರ : ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡಲು ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರವೇ ಕಾರಣ, ಅವರ ಅಧಿಕಾರ ದಾಹದಿಂದ ಜನ ತತ್ತರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಹಸ್ತ ಜಿಲ್ಲಾ ಸಹಾಯವಾಣಿ ಉದ್ಘಾಟಿಸಿ ಅವರು ಮಾತನಾಡಿ, ಹಬ್ಬ, ಜಾತ್ರೆಗಳಿಗೆಲ್ಲಾ ಅವಕಾಶ ಕೊಟ್ಟು, ಅಧಿಕಾರ ದಾಹದಿಂದ ಚುನಾವಣೆಯನ್ನು ನಡೆಸಿ, ಕುಂಭಮೇಳಕ್ಕೆ ಅವಕಾಶ ಮಾಡಿಕೊಟ್ಟು ಕೊರೊನಾ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂದು ಜನರ ಸಾವುನೋವಿಗೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಪಕ್ಷದ ನಾಯಕರೇ ಕೊರೊನಾ ಸಂಕಷ್ಟದಲ್ಲೂ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
ಸರ್ಕಾರದ ಮೇಲಿನ ನಂಬಿಕೆಯೇ ಹೋಗಿದ್ದು ಅವರು ಕೊಡುವ ಕೊರೊನಾ ಸೋಂಕಿತರ ಸಾವು ಹಾಗೂ ಕೇಸ್‌ಗಳ ಸಂಖ್ಯೆಯಲ್ಲೂ ಸಂಶಯ ಮೂಡಿದೆ ಎಂದು ಕಿಡಿಕಾರಿದರು.
ಮನಮೋಹನ್ ಸಿಂಗ್ ಅವರನ್ನು ಮೌನಿ ಸಿಂಗ್ ಎಂದು ಟೀಕಿಸುತ್ತಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಭಾರತ ಎಂದೂ ದೈನೆಸಿ ಸ್ಥಿತಿ ತಲುಪಿರಲಿಲ್ಲ. ಇಂದು ಎಲ್ಲಾ ರಾಷ್ಟ್ರಗಳ ನೆರವಿಗೆ ಭಾರತ ಕೈ ಚಾಚುವಂತಾಗಿದೆ. ದೇಶದ ಬಡವರಿಗೆ ಮೊದಲು ಲಸಿಕೆ ಕೊಡುವ ಬದಲು ರಪ್ತು ಮಾಡಲಾಗುತ್ತಿದೆ ಎಂದು ಸರ್ಕಾರದ ನೀತಿಯನ್ನು ಜರಿದರು.
ಮೊದಲನೇ ಅಲೆ ಕಳೆದ ಬಳಿಕ ಎರಡನೇ ಅಲೆ ಎದುರಿಸಲು ಸರ್ಕಾರ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು. ಆ ಕೆಲಸಗಳು ಆಗಿಲ್ಲ, ಸಾವಿರಾರು ಕೋಟಿ ರೂ. ವ್ಯಯಿಸಿ ನೂತನ ಸಂಸತ್ ಭವನ ನಿರ್ಮಿಸುತ್ತಿದ್ದಾರೆ. ಈಗ ದೇಶದ ಮೊದಲ ಆದ್ಯತೆ ಆರೋಗ್ಯ ಕಾಪಾಡುವುದು ಎಂಬುದನ್ನೇ ಮರೆತಂತಿದ್ದು, ಅಧಿಕಾರ ದಾಹ, ಹಣದ ಮದದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಆರೋಗ್ಯ ಹಸ್ತ ಸಹಾಯವಾಣಿ ಉದ್ಘಾಟನೆ : ಕೆಪಿಸಿಸಿ ವತಿಯಿಂದ ಇಂದು ಆರೋಗ್ಯ ಹಸ್ತ ಸಹಾಯವಾಣಿ ಉದ್ಘಾಟನೆಯಾಗಿದ್ದು, ಮೂವರು ವೈದ್ಯರು ಟೆಲಿ ಮೆಡಿಸಿನ್ ಮೂಲಕ ಕೋವಿಡ್ ಸೋಂಕಿತರಿಗೆ ಮನೋಸ್ಥೈರ್ಯ ಹಾಗೂ ಕೋವಿಡೇತರರಿಗೆ ಆರೋಗ್ಯ ಸಲಹೆ ನೀಡಲಿದ್ದಾರೆ. ಕರೆಗಳನ್ನು ಸ್ವೀಕರಿಸಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.