ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಸಚಿವ ಎಸ್.ಟಿ. ಸೋಮಶೇಖರ್ ಮೈಸೂರು ಉಸ್ತುವಾರಿ ಜೊತೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊತ್ತಿದ್ದು, ಆರಂಭದಲ್ಲಿದ್ದ ಜಿಲ್ಲಾ ಭೇಟಿ ಆಸಕ್ತಿ ಈಗ ಕಾಣದಾಗಿದೆ ಎಂಬ ದೂರು ಕೇಳಿಬಂದಿದೆ.
ಮೈಸೂರು ಜಿಲ್ಲೆಗೆ ಆಗಾಗ ಬರುವ ಸಚಿವರು 70 ಕಿ.ಮೀ ದೂರದಲ್ಲಿರುವ ಚಾಮರಾಜನಗರಕ್ಕೆ ಆಗೊಮ್ಮೆ-ಈಗೊಮ್ಮೆ ಬರುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ಚಾಮರಾಜನಗರ ಜಿಲ್ಲಾ ದಸರಾಗೆ ಗೈರಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕನಿಷ್ಠ ವಾರಕ್ಕೊಮ್ಮೆ, ಕೆಲವೊಮ್ಮೆ ವಾರಕ್ಕೆರಡು ಬಾರಿ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡು ಅಧಿಕಾರಿಗಳೊಂದಿಗೆ ನಿರಂತರ ಸಭೆ, ಗ್ರಾಮೀಣ ಭಾಗದ ನೈಜ ದರ್ಶನವನ್ನು ಕಾಣುತ್ತಿದ್ದರು. ಭಾವನಾತ್ಮಕವಾಗಿಯೂ ಜನರೊಂದಿಗೆ ಬೆರೆಯುತ್ತಿದ್ದರು.
ಆದರೆ, ಸಚಿವ ಸೋಮಶೇಖರ್ ಮಾತ್ರ ತಿಂಗಳಿಗೊಮ್ಮೆ ಬಂದರೆ ಹೆಚ್ಚು ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಕನ್ನಡ ರಾಜ್ಯೋತ್ಸವಕ್ಕಾದರೂ ಬರುತ್ತಾರೆಯೇ ಎನ್ನುವ ಮಟ್ಟಿಗೆ ಅವರ ಬರುವಿಕೆಗೆ ಕಾಯಬೇಕಿದೆ. ಜಿಲ್ಲೆಗೆ ಬಂದ ವೇಳೆ ಸ್ಥಳೀಯರು ನೀಡುವ ಅಹವಾಲು, ಮನವಿ, ವಿವಿಧ ಸಮಸ್ಯೆಗಳು ಸಚಿವರ ಅವಗಾಹನೆಗೆ ಬರಲಿದೆ. ಕೇವಲ ಪತ್ರಿಕಾ ಪ್ರಕಟಣೆ ಮೂಲಕ ಜನಸಂಪರ್ಕ ಸಾಧ್ಯವಿಲ್ಲ ಎಂಬುದು ಸ್ಥಳೀಯರ ದೂರು.
ಇದನ್ನೂ ಓದಿ: ಧಾರವಾಡ: ಕಾಂಗ್ರೆಸ್ ಮುಖಂಡನ ಆಪ್ತನ ಮನೆ ಮೇಲೆ ಐಟಿ ದಾಳಿ