ಚಾಮರಾಜನಗರ: ತಂದನಾ ತಾನನ- ತಂದನಾನಾ ತಾನನ ವೋಟು ಹಾಕಿ ಗೆಲ್ಲಿಸಿ, ಗ್ರಾಮದ ಅಭಿವೃದ್ಧಿ ನೋಡಿ.. ಎಂದು ಕೊರಳಲ್ಲಿ ನಾಮಪತ್ರ ಹಾಕಿಕೊಂಡು, ಕೈಯಲ್ಲಿ ಕಂಸಾಳೆ ಬಾರಿಸುತ್ತಾ ಪತ್ನಿ ಪರ ಮತಯಾಚಿಸುತ್ತಿರುವ ವ್ಯಕ್ತಿ.
ಹೌದು, ಹೀಗೆ ಪ್ರಚಾರ ಮಾಡುತ್ತಿರುವ ವ್ಯಕ್ತಿ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ 5 ನೇ ವಾರ್ಡ್ನಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಜಯಮ್ಮ ಅವರ ಪತಿ ಬ್ಯಾಂಗೇಗೌಡ. ತಮ್ಮ ವಿನೂತನ ಶೈಲಿಯ ಪ್ರಚಾರಕ್ಕೆ ಇಳಿದು ಮತದಾರರನ್ನು ಸೆಳೆಯುತ್ತಿದ್ದಾರೆ.
ಜೋಳಿಗೆ ತುಂಬಾ ಕರಪತ್ರಗಳನ್ನು ತುಂಬಿಕೊಂಡು ಕೊರಳಿಗೂ ಕರಪತ್ರ ಅಂಟಿಸಿಕೊಂಡು 'ಮಾದಪ್ಪನಿಗೆ ಅಕ್ಕಿ ಕೊಡಿ - ವೋಟು ನನ್ನ ಪತ್ನಿಗೆ ಕೊಡಿ' ಎಂದು ಮನೆಮನೆ, ಬೀದಿ ಬೀದಿ ತಿರುಗುತ್ತಿದ್ದಾರೆ. ಸಿಲಿಂಡರ್ ಗುರುತು ಮರೆಯದಿರಿ ಎಂದು ಕಂಸಾಳೆ ಬಾರಿಸುತ್ತಾ, ಗ್ರಾಮಾಭಿವೃದ್ದಿಯನ್ನು ಮರೆಯುವುದಿಲ್ಲ ಎಂದು ವಾಗ್ದಾನ ನೀಡುವ ಮೂಲಕ ವಿನೂತನ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್
ಕಳೆದ ಬಾರಿಯ ಚುನಾವಣೆಯಲ್ಲಿ ಪತ್ನಿ ಜಯಮ್ಮ ಕಣಕ್ಕಿಳಿದು ಪರಾಭವಗೊಂಡಿದ್ದರು. ಆದ್ದರಿಂದ, ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪತಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತ ಭಿಕ್ಷೆ ಕೇಳುತ್ತಿದ್ದಾರೆ. ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಕಲಾವಿದರೊಬ್ಬರು ತಂಬೂರಿ ಹಿಡಿದಿದ್ದರು. ಎರಡನೇ ಹಂತದ ಮತದಾನದಲ್ಲಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತಯಾಚಿಸುತ್ತಿದ್ದಾರೆ.