ಚಾಮರಾಜನಗರ: ವಿ. ಶ್ರೀನಿವಾಸಪ್ರಸಾದ್ ಅವರನ್ನು ಅವಕಾಶವಾದಿ ರಾಜಕಾರಣಿ ಎನ್ನುವ ಸಂಸದ ಧ್ರುವನಾರಾಯಣ ಹಿಂದೆ ಬಿಜೆಪಿಯಿಂದಲೇ ಕಾಂಗ್ರೆಸ್ಗೆ ಹೋದವರು ಎಂದು ಶಾಸಕ ಸುರೇಶ್ ಕುಮಾರ್ ತಿರುಗೇಟು ನೀಡಿದರು.
ಗುಂಡ್ಲುಪೇಟೆ ನ್ಯಾಯಾಲಯ ಆವರಣದಲ್ಲಿ ವಕೀಲರ ಬಳಿ ಮತಯಾಚಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಧ್ರುವನಾರಾಯಣ ಮೊದಲು ಬಿಜೆಪಿಯಲ್ಲಿದ್ದರು. ನಂತರ ಕಾಂಗ್ರೆಸ್ಗೆ ಹೋದವರು. ಬೇರೆಯವರ ವಿರುದ್ಧ ಆರೋಪ ಮಾಡುವ ಅವರು ಮೊದಲು ತಮ್ಮ ಬಗ್ಗೆ ಯೋಚಿಸಬೇಕು ಎಂದರು. ದೇಶಕ್ಕೆ ಓರ್ವ ನಿರ್ಣಾಯಕ ವ್ಯಕ್ತಿ ಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.
ಐಟಿ ದಾಳಿ ಮಾಡುತ್ತಿರುವುದು ಇಲಾಖೆಯಷ್ಟೇ, ಮೋದಿಯವರಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂವಿಧಾನ ನಿರ್ಮಾಣ ಮಾಡಿದವರು ಮಾಹಾನ್ ಮೇಧಾವಿಗಳು. ಅದನ್ನು ಬದಲಾಯಿಸಲು ಸಾದ್ಯವಿಲ್ಲ. ಸಂವಿಧಾನ ಅನ್ನೋದು ಬದಲಾಯಿಸುವ ಗ್ರಂಥ ಅಲ್ಲ. ಅದು ಸ್ಟ್ರಾಂಗ್ ಡಾಕ್ಯುಮೆಂಟ್ ಎಂದರು.