ಚಾಮರಾಜನಗರ: ಕೆಬ್ಬೇಕಟ್ಟೆ ಶನೇಶ್ವರ ದೇಗುಲದಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳ ಜಾಮೀನು ಅರ್ಜಿ ಆದೇಶವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜು. 22ಕ್ಕೆ ಮುಂದೂಡಿಕೆ ಮಾಡಿದೆ.
ಸಂತ್ರಸ್ತರಾದ ಪ್ರತಾಪ್ ಮಂಗಳವಾರ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮುಂದುವರೆದ ವಾದ-ಪ್ರತಿವಾದ ಆಲಿಸಿದ ನ್ಯಾಯಧೀಶ ಬಸವರಾಜ ಅವರು ಜಾಮೀನು ಆದೇಶವನ್ನು ಜು. 22ಕ್ಕೆ ಕಾಯ್ದಿರಿಸಿದ್ದಾರೆ.
ಖಾಸಗಿ ವಕೀಲರಿಂದ ವಾದ ಮಂಡಿಸಲು ಒಪ್ಪಿಗೆ:
ಈಗಾಗಲೇ ಪ್ರತಾಪ್ ಪರ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ ಅವರು ವಾದ ಮಂಡಿಸುತ್ತಿದ್ದರು. ಆದರೆ ಇಂದು ಸಂತ್ರಸ್ತ ಪ್ರತಾಪ್ ಅವರ ಖಾಸಗಿ ವಕೀಲರಿಂದ ವಾದ ಮಂಡಿಸುವ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.
ಇನ್ನು ಸಂತ್ರಸ್ತನನ್ನು ಉದ್ದೇಶಪೂರ್ವಕವಾಗಿ ಜಾತಿಯ ಕಾರಣದಿಂದ ಬೆತ್ತಲೆಗೊಳಿಸಿ ಥಳಿಸಿದ್ದಾರೆಂದು ವಕೀಲರು 6 ವಿಡಿಯೋಗಳ ಸಿಡಿ ಮತ್ತು ಈ ಕುರಿತು ವರದಿ ಮಾಡಿದ್ದ ಪತ್ರಿಕೆಯ ತುಣುಕುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.