ಚಾಮರಾಜನಗರ : ಬಸ್ಗಾಗಿ ಕಾಯುವಾಗ ಹುಡುಗಿ ಪಕ್ಕದಲ್ಲಿ ನಿಂತಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಇಂದು ನಡೆದಿದೆ. ತಾಲೂಕಿನ ಮಂಗಲ ಗ್ರಾಮದ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿ. ಈ ಸಂಬಂಧ ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್, ಗೋಪಾಲ ಹಾಗೂ ತೇಜು ಎಂಬವರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ನಾಗೇಶ್ ಅವರು ತಮ್ಮ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕ ನಾಗೇಶ್ ಮತ್ತು ಅವರ ತಾಯಿ ಮಂಗಲ ಗ್ರಾಮಕ್ಕೆ ಹೋಗಲು ಹಂಗಳ ಪ್ರಯಾಣಿಕರ ತಂಗುದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ನಾಗೇಶ್ ಪಕ್ಕ ನಿಂತಿದ್ದನ್ನು ಕಂಡು ಸಹಿಸದ ಯುವಕರು ರೊಚ್ಚಿಗೆದ್ದು ನಾಗೇಶ್ ಅವರ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ನಾಗೇಶ್ ಅವರ ಮೇಲೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಹಲ್ಲೆ ವೇಳೆ ಗುಂಪಲ್ಲಿ ಯುವಕನೋರ್ವ ನಾಗೇಶ್ ಅವರಿಗೆ ಬ್ಲೇಡ್‍ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ನಾಗೇಶ್ ತನ್ನ ಕೈಯಿಂದ ತಡೆದಿದ್ದು, ಕೈಗೆ ಕುಯ್ದ ಗಾಯವಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಜಿಂಕೆ ಚರ್ಮ ಸಾಗಾಟ ಮಾಡುತ್ತಿದ್ದವರ ಬಂಧನ : ಜಿಂಕೆ ಚರ್ಮವನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಮಾದಯ್ಯ(40), ಮಹದೇವ ನಾಯಕ (51) ಎಂದು ಗುರುತಿಸಲಾಗಿದೆ.
ಆರೋಪಿಗಳು ಕಾಳಸಂತೆಯಲ್ಲಿ ಜಿಂಕೆ ಚರ್ಮ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಜಿಂಕೆ ಚರ್ಮ, ಮೊಬೈಲ್, ಹಣ ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.
ಬಾಗಲಕೋಟೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ : ಬಾಗಲಕೋಟೆಯ ನವನಗರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ನಗರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸಂಚಾರ ವಿಷಯವಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ಕೆಲವರು ಗಾಯಗೊಂಡಿದ್ದು, ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಹಾಗೂ ಡಿಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಘಟನೆ ಸಂಬಂಧ ಹಿಂದೂ ಸಂಘಟನೆ ಮುಖಂಡರು ಆಸ್ಪತ್ರೆಯ ಮುಂದೆ ದೌಡಾಯಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಘಟನೆ ಸಂಬಂಧ ನವನಗರದ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿದೆ. ಈಗಾಗಲೇ ಸುಮಾರು 30 ಜನರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಭದ್ರತೆಗೆ ಕೆಎಸ್ಆರ್ಪಿ ತುಕುಡಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ : ಯಲ್ಲಮ್ಮ ದೇವಿ ಉತ್ಸವದಲ್ಲಿ ನೂಕು ನುಗ್ಗಲು.. ಐವರಿಗೆ ಚಾಕು ಇರಿತ, 200 ಮೊಬೈಲ್ ಕಳವು!