ಕೊಳ್ಳೇಗಾಲ: ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಂದಲೇ ತಾಲೂಕಿನಲ್ಲಿ ಸೋಂಕು ಹರಡುತ್ತಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಂದಲೇ ಸೋಂಕು ಹರಡುತ್ತಿದೆ. ಆದ್ದರಿಂದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಸಿಡಿಪಿಒ ನೇತೃತ್ವದ ತಂಡ ಹೋಂ ಐಸೋಲೇಷನ್ನಲ್ಲಿರುವವರಿಗೆ, ಅವರ ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಇದೆಯಾ ಹಾಗೂ ಸರಿಯಾಗಿ ಚಿಕಿತ್ಸೆ ಸಿಗುತ್ತಿದೆಯಾ ಎಂದು ಪರಿಶೀಲಿಸಬೇಕು. ಈ ವಿಚಾರದಲ್ಲಿ ಲೋಪವೆಸಗಿದರೆ ಸಂಬಂಧಪಟ್ಟವರನ್ನೇ ಹೊಣೆಗಾರರನ್ನಾಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸದ್ಯ ತಾಲೂಕಿನಲ್ಲಿ ಹೋಂ ಐಸೋಲೇಷನ್ನಲ್ಲಿ 969 ಮಂದಿ ಇದ್ದು, ನಿಜಕ್ಕೂ ಇವರು ಮನೆಯಲ್ಲಿದ್ದಾರಾ ಎಂಬುವುದರ ಬಗ್ಗೆ ಪರಿಶೀಲನೆ ಮಾಡಿ ಸಮಗ್ರ ವರದಿ ತಯಾರಿಸಿ. ಪ್ರತ್ಯೇಕ ಸೌಲಭ್ಯ ಇಲ್ಲದಿರುವವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇದುವರೆಗೆ ತಾಲೂಕಿನಲ್ಲಿ 1,643 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸದ್ಯ 1,054 ಸಕ್ರಿಯ ಪ್ರಕರಣಗಳಿವೆ. ಹೋಂ ಐಸೋಲೇಷನ್ನಲ್ಲಿ 969 ಮಂದಿ ಇದ್ದಾರೆ. 40 ಮಂದಿಯನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲು ಮಾಡಲಾಗಿದೆ. ತಾಲೂಕಿನಲ್ಲಿ ಆಕ್ಸಿಜನ್ ಕೊರತೆ ಸದ್ಯಕ್ಕೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಜನರಿಂದ ಹೆಚ್ಚಿನ ಹಣ ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸರ್ಕಾರದ ಆದೇಶ ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ನಕಲಿ ವೈದ್ಯರ ಹಾವಳಿ: ತಾಲೂಕಿನ ಸತ್ತೇಗಾಲದ ಜಾಗೇರಿ, ಕುಂತೂರು, ಸಿಂಗಾನಲ್ಲೂರು ಗ್ರಾಮಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಈ ವೈದ್ಯರು ರೋಗಿಗಳಿಗೆ ಚಿಕಿತ್ಸೆಯನ್ನೂ ನೀಡುತ್ತಿದ್ದಾರೆ. ಜ್ವರ ಎಂದು ಬಂದವರಿಗೆ ಇವರು ನೀಡುವ ಚಿಕಿತ್ಸೆ ವ್ಯಾಪಕ ಪರಿಣಾಮ ಬೀರುತ್ತಿರುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಇವತ್ತಿನಿಂದಲೇ ಈ ಬಗ್ಗೆ ತಹಶೀಲ್ದಾರ್ ಹಾಗೂ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಇಂತಹ ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿರುವವರೇ? ಇಲ್ಲ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರಾ ಎಂದು ನೋಡಿ. ನಿಜಕ್ಕೂ ಇವರು ನಕಲಿ ವೈದ್ಯರು ಎಂದು ಸಾಬೀತಾದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಎಂದು ಶಾಸಕರು ಸೂಚಿಸಿದರು.
ಜೂಜು, ಕುಡುಕರ ಅಡ್ಡೆ ಮೇಲೆ ನಿಗಾ: ಲಾಕ್ಡೌನ್ನಲ್ಲಿ ಅಕ್ರಮ ಜೂಜು ಅಡ್ಡೆಗಳು ತಲೆ ಎತ್ತಿದ್ದು, ಹೆಚ್ಚು ಮಂದಿ ಒಂದೆಡೆ ಸೇರುವುದರಿಂದ ಸೋಂಕು ಹರಡು ಸಾಧ್ಯತೆ ಇದೆ. ಇನ್ನು ಕುಡುಕರು ಮದ್ಯ ಸೇವಿಸಲು ಅಡ್ಡೆಗಳನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಅಡ್ಡೆಗಳ ಮೇಲೆ ಪೊಲೀಸರು ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.