ಚಾಮರಾಜನಗರ: ಕೊರೊನಾ ಲಾಕ್ಡೌನ್ ಆದಾಗಿನಿಂದ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಳಿಕ ಲಾಕ್ಡೌನ್ ಸಡಿಲಿಕೆ ಮಾಡಿದ ಕಾರಣ ಜಿಲ್ಲೆಯ ದೇವಾಲಯಗಳು, ಪ್ರವಾಸಿ ತಾಣಗಳು ಕೆಲವು ನಿರ್ಬಂಧಗಳ ಮೇಲೆ ತೆರೆಯಲ್ಪಟ್ಟಿವೆ. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಜನತೆ ತಾಣಗಳಿಗೆ ಭೇಟಿ ನೀಡದೆ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಖಾಲಿ ಖಾಲಿಯಾಗಿವೆ.
ಲಾಕ್ಡೌನ್ ಅನ್ಲಾಕ್ ಮಾಡಿದ ಮೊದಲ ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯ ದೇಗುಲಗಳು, ಪ್ರವಾಸಿ ತಾಣಗಳು ಭಣಗುಡುತ್ತಿವೆ.
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ ಮತ್ತು ಭಾನುವಾರ ಎರಡೂ ದಿನ ಸೇರಿ ಸಾವಿರ ಮಂದಿ ಕೂಡಾ ಆಗಮಿಸಿಲ್ಲ. ಗೋಪಾಲನ ದರ್ಶನದೊಂದಿಗೆ ಹಿಮಚ್ಛಾದಿತ ಬೆಟ್ಟಗಳಿಗೆ ಮಾರು ಹೋಗಬೇಕಿದ್ದ ಪ್ರವಾಸಿಗರು ಕೊರೊನಾಂತಕದ ನಡುವೆ ಕಾಲಿಡದೆ ದೂರವೇ ಉಳಿದಿದ್ದಾರೆ.
ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಿದ್ದ ಜಿಲ್ಲೆಯ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಭರಚುಕ್ಕಿ, ಶಿವನ ಸಮುದ್ರಕ್ಕೆ ಪ್ರವಾಸಿಗರ ಸಂಖ್ಯೆ ಮೂರಂಕಿ ದಾಟಿಲ್ಲ. ಮುಂಗಾರು ಆರಂಭವಾಗಿದ್ದು, ಸ್ಥಳೀಯ ರೈತರು ಬಿತ್ತನೆಗೂ ಮುನ್ನ ಗೋಪಾಲಸ್ವಾಮಿ, ಬಿಳಿಗಿರಿ ರಂಗನಾಥನ ಆಶೀರ್ವಾದ ಪಡೆಯುವುದು ವಾಡಿಕೆಯಾದ್ದರಿಂದ ರೈತರಷ್ಟೇ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಕಂಡು ಬಂದಿತು.
ಪ್ರಸಿದ್ಧ ಬಂಡೀಪುರ ಸಫಾರಿಗೂ ಪ್ರವಾಸಿಗರ ಸಂಖ್ಯೆ ಭಾರೀ ಕಡಿಮೆಯಾಗಿದ್ದು, ಸಫಾರಿ ಕೌಂಟರ್ ಖಾಲಿ ಖಾಲಿ ಎಂಬತಾಗಿದೆ. ಒಟ್ಟಿನಲ್ಲಿ ಲಾಕ್ಡೌನ್ ಅನ್ಲಾಕ್ ಆದರೂ ಕೋವಿಡ್-19 ಭೀತಿಗೆ ಪ್ರವಾಸೋದ್ಯಮ ಸಂಪೂರ್ಣ ನೆಲಕ್ಕಚ್ಚಿದೆ.