ಚಾಮರಾಜನಗರ: ಜಿಲ್ಲೆಯಲ್ಲಿಂದು ಹೊಸದಾಗಿ 60 ಕೋವಿಡ್ ಕೇಸ್ ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಬಲಿಯಾಗಿದ್ದಾರೆ. 81 ವರ್ಷದ ವೃದ್ಧೆ ಮಹಾಮಾರಿ ಜಯಿಸುವ ಮೂಲಕ ಜೀವನೋತ್ಸಾಹ ತೋರಿದ್ದಾರೆ.
ಜಿಲ್ಲೆಯ ಸೋಂಕಿತರ ಸಂಖ್ಯೆ 1432 ಕ್ಕೆ ಏರಿಕೆಯಾಗಿದ್ದು, 54 ಮಂದಿ ಇಂದು ಬಿಡುಗಡೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 425 ಆಗಿದೆ. ಹೋಂ ಐಸೋಲೇಷನ್ನಲ್ಲಿ 114 ಮಂದಿ ಇದ್ದು 775 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಹನೂರು ತಾಲೂಕಿನ ಎಲ್ಲೆಮಾಳದ 64 ವರ್ಷದ ಮಹಿಳೆ ಕಿಡ್ನಿ ಸಮಸ್ಯೆಯಿಂದ ಕೋಮಾಗೆ ತಲುಪಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಕೊರೊನಾ ದೃಢಪಟ್ಟಿದೆ. ಇನ್ನು, ಎಎಸ್ಐ ಒಬ್ಬರು ಸೋಂಕಿತರಾಗಿ ಕಳೆದ 30 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು ಚಾಮರಾಜನಗರದ 81 ವರ್ಷ ವೃದ್ಧೆ ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳುವ ಮೂಲಕ ಹಲವರಿಗೆ ಚೈತನ್ಯ ಮೂಡಿಸಿದ್ದಾರೆ. ಇವರೊಟ್ಟಿಗೆ, ಮಲ್ಲಮ್ಮನಹುಂಡಿಯ 77 ವರ್ಷದ ವೃದ್ಧ, ಚಾಮರಾಜನಗರದ 62 ವರ್ಷದ ವೃದ್ಧ, ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿಯ 61 ವರ್ಷದ ಮಹಿಳೆ, ಯಳಂದೂರಿನ 65 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.