ಚಾಮರಾಜನಗರ: ಕೊರೊನಾ ಲಸಿಕೆ 2021ರ ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆ ಇರುವುದರಿಂದ ಚಾಮರಾಜನಗರದಲ್ಲಿ ಸಿದ್ಧತೆ ಜೋರಾಗಿದ್ದು, ಟಾಸ್ಕ್ ಫೋರ್ಸ್ ರಚಿಸಿ ಲಸಿಕೆ ಆದ್ಯತಾ ಪಟ್ಟಿ ತಯಾರಿಸಲು ಜಿಲ್ಲಾಡಳಿತ ಮುಂದಾಗಿದೆ.
ಲಸಿಕೆ ಬಂದ ವೇಳೆ ಕೋವಿಡ್-19 ನಿರ್ವಹಣೆಯಲ್ಲಿ ನಿರತರಾಗಿರುವ ಆರೋಗ್ಯ ಸೇವೆ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕಾಗಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿಖರ ಮಾಹಿತಿ ಕಲೆಹಾಕಲು ಡಿಸಿ ಸೂಚಿಸಿದ್ದಾರೆ.
ಪ್ರಥಮ ಹಂತದಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಎಲ್ಲ ಹಂತದ ಆಸ್ಪತ್ರೆಗಳು. ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ ಆಸ್ಪತ್ರೆ, ಕಾರ್ಪೋರೇಟ್ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಹೋಂ, ಕ್ಲಿನಿಕ್‍ಗಳಲ್ಲಿ ಇರುವ ಎಲ್ಲಾ ಆರೋಗ್ಯ ಸಂಬಂಧಿ ಸೇವಾ ಕಾರ್ಯಕರ್ತೆಯರನ್ನು ಒಳಗೊಂಡ ಪಟ್ಟಿ ತಯಾರಿಕೆ ಕಾರ್ಯ ಭರದಿಂದ ಸಾಗಿದೆ.
ಆದ್ಯತೆ ಪಟ್ಟಿ ಸಿದ್ದಪಡಿಸುವ ಸಲುವಾಗಿಯೇ ಅಧಿಕಾರಿಗಳ ತಂಡ ರಚನೆ ಮಾಡಿ ಸೂಕ್ತ ತರಬೇತಿ ನೀಡಲಿದ್ದು, ಜಿಲ್ಲಾ - ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳೇ ಉತ್ತರದಾಯಿತ್ವವಾಗಿ ಕಾರ್ಯನಿರ್ವಹಿಸಬೇಕಿದೆ. ಲಸಿಕೆ ದಾಸ್ತಾನು ನಿರ್ವಹಣೆ ಸೇರಿದಂತೆ ಒಟ್ಟಾರೆ ಪ್ರಥಮ ಹಂತದಲ್ಲಿ ಲಸಿಕೆ ನೀಡುವ ಉದ್ದೇಶಕ್ಕಾಗಿಯೇ ಪೂರ್ವ ಯೋಜಿತವಾಗಿ ಎಲ್ಲ ಸಿದ್ದತೆಗಳನ್ನು ಒಳಗೊಂಡ ನೀಲಿ ನಕಾಶೆ ತಯಾರಿಸಲಿದ್ದಾರೆ.
ವಾಟ್ಸ್ ಆ್ಯಪ್ ಗ್ರೂಪ್:
ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ಅಧಿಕಾರಿಗಳನ್ನೊಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ತೆರದು ಲಸಿಕೆ ಕುರಿತು ಹೆಚ್ಚಿನ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿಯೇ ಕಂಟ್ರೋಲ್ ರೂಂ ತೆರೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಪೂರ್ವಭಾವಿ ಸಭೆ ನಡೆಸಿ ಸೂಚಿಸಿದ್ದಾರೆ.