ಚಾಮರಾಜನಗರ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಇಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ 65 ವರ್ಷದ ಸೋಂಕಿತ ವ್ಯಕ್ತಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರೆನ್ನಲಾಗಿದ್ದು, ಉಸಿರಾಟದ ಸಮಸ್ಯೆಯಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಅಂತ್ಯ ಸಂಸ್ಕಾರವನ್ನು ಜಿಲ್ಲಾಡಳಿತ ಗುರುತಿಸಿರುವ ಸರ್ಕಾರಿ ಭೂಮಿಯಲ್ಲಿ ಪಿಎಫ್ಐ ಕಾರ್ಯಕರ್ತರು ನೆರವೇರಿಸಿದ್ದಾರೆ. ದೂರದಿಂದಲೇ ಅವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.
ಈ ಕುರಿತು ಸಂಘಟನೆಯ ಜಿಲ್ಲಾಧ್ಯಕ್ಷ ಕಪಿಲ್ ಈಟಿವಿ ಭಾರತದೊಂದಿಗೆ ಮಾತನಾಡಿ, ಈ ರೀತಿಯ ಸಾವು ಯಾವ ಶತೃವಿಗೂ ಬರಬಾರದು. ಕುಟುಂಬಸ್ಥರು ಮೃತದೇಹ ಮುಟ್ಟದಂತಹ ಸಾವು ನಿಜಕ್ಕೂ ಘೋರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಿಎಫ್ಐನ 80ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸುರಕ್ಷಿತ ಹಾಗೂ ಗೌರವಯುತ ಅಂತ್ಯ ಸಂಸ್ಕಾರ ನಡೆಸಲು ತರಬೇತಿ ತೆಗೆದುಕೊಂಡಿದ್ದು, ಗೌರವಯುತವಾಗಿ ಸಂಸ್ಕಾರವನ್ನು ನಡೆಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಸೋಂಕಿತರು ಯಾರಾದರೂ ಮೃತಪಟ್ಟರೆ ಖಬರಸ್ಥಾನದಲ್ಲೇ ದಫನ್ ಮಾಡಬೇಕೆಂದು ವಕ್ಪ್ ಮಂಡಳಿ ಈಗಾಗಲೇ ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದರು. ಇಂದು ಮೃತಪಟ್ಟ ವ್ಯಕ್ತಿ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.