ಚಾಮರಾಜನಗರ : ತಮಿಳುನಾಡಿನ ವ್ಯಾಪಾರಿಗಳು ಸಣ್ಣ ಈರುಳ್ಳಿ ಕೊಳ್ಳಲು ಬಾರದಿರುವುದರಿಂದ ಗಡಿಜಿಲ್ಲೆ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿ ಸಾವಿರಾರು ಮಂದಿ ರೈತರು ಉತ್ತಮ ಬೆಲೆಯ ನಿರೀಕ್ಷೆ ಇಟ್ಟುಕೊಂಡು ಸಣ್ಣ ಈರುಳ್ಳಿ ಬೆಳೆದಿದ್ದಾರೆ. ಫಸಲು ಚೆನ್ನಾಗಿ ಬಂದರೂ ತಮಿಳುನಾಡಿನ ವ್ಯಾಪಾರಿಗಳು ಕೊರೊನಾ ಭೀತಿ, ಲಾಕ್ಡೌನ್ ಸಂಕಷ್ಟದ ನೆಪವೊಡ್ಡಿ ವ್ಯಾಪಾರಕ್ಕೆ ಬರದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಕೆಲವು ತಿಂಗಳ ಹಿಂದೆ ಈರುಳ್ಳಿಗೆ ಉತ್ತಮ ಬೆಲೆ ಬಂದಿದ್ದರಿಂದ ಬಿತ್ತನೆ ಈರುಳ್ಳಿಗೆ ಬರೋಬ್ಬರಿ ಕ್ವಿಂಟಾಲ್ಗೆ 8,000-9,000 ರೂ. ಹಣ ತೆತ್ತು ರೈತರು ಖರೀದಿಸಿದ್ದರು. ಕೆಲವು ಕಡೆ ಬಿತ್ತನೆ ಈರುಳ್ಳಿ ಸಿಗದೇ ಪ್ರತಿಭಟನೆ ನಡೆಸಿ ಕೊಂಡುಕೊಂಡಿದ್ದರು.
ಈಗ ರೈತರ ಎಲ್ಲಾ ಕನಸು ಕಮರಿದ್ದು ಈರುಳ್ಳಿ ಕೊಳೆಯುತ್ತಿದೆ. ಈ ಕುರಿತು ಯಾನಗಹಳ್ಳಿ ರೈತ ಪ್ರಭುಸ್ವಾಮಿ ಮಾತನಾಡಿ, ಒಂದೂವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ಫಸಲು ಚೆನ್ನಾಗಿ ಬಂದಿದೆ. ಆದರೆ, ತಮಿಳುನಾಡಿನಿಂದ ಯಾರೂ ವ್ಯಾಪಾರಕ್ಕೆ ಬರುತ್ತಿಲ್ಲ, ಈರುಳ್ಳಿ ಕೊಳೆಯುತ್ತಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಯಾನಗಹಳ್ಳಿ ಗ್ರಾಮದ ಮತ್ತೋರ್ವ ಮಹಾದೇವಸ್ವಾಮಿ ಮಾತನಾಡಿ, ಅನ್ಲಾಕ್ ಆದರೂ ರೈತರ ಸಂಕಷ್ಟ ಮಾತ್ರ ಬಗೆಹರಿದಿಲ್ಲ. ಜಿಲ್ಲಾಡಳಿತ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕು. 8,000-9,000 ರೂ. ಕೊಟ್ಟು ತಂದು ಬೆಳೆದಿದ್ದೇವೆ. ಈಗ ಬೆಲೆ 1,000-1,200 ರೂ. ಆಗಿದೆ. ವ್ಯಾಪಾರಿಗಳು, ದಲ್ಲಾಳಿಗಳು ಬರದೇ ಅತಂತ್ರರಾಗಿದ್ದೇವೆ ಎಂದು ಅಳಲು ತೋಡಿಕೊಂಡರು.