ಚಾಮರಾಜನಗರ: ಆನೆ ಕಾರಿಡಾರಿನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದಾರೆಂದು ಪರಿಸರವಾದಿ ಜೋಸೆಫ್ ಹೂವರ್ ಮಾಡಿರುವ ಗಂಭೀರ ಆರೋಪವನ್ನು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಳ್ಳಿಹಾಕಿದ್ದಾರೆ. ಕಾನೂನಿನ ಪ್ರಕಾರ ಎಲ್ಲ ಷರತ್ತುಗಳನ್ನು ಪಾಲಿಸಿದ್ದು, ಊಹಾಪೋಹಗಳ ಅನಗತ್ಯ ಎಂದು ಸಂಜಯ್ ಗುಬ್ಬಿ ಪ್ರತಿಕ್ರಿಯೆ ನೀಡಿದ್ದಾರೆ.
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಆನೆ ಕಾರಿಡಾರಿನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದಾರೆಂದು ಪರಿಸರವಾದಿ ಜೋಸೆಫ್ ಹೂವರ್ ಗಂಭೀರ ಆರೋಪ ಮಾಡಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದ ಸರ್ವೇ ನಂ 279 ರ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದು ಪರಿಸರ ಸೂಕ್ಷ್ಮ ವಲಯದಲ್ಲಿದೆ. ಜೊತೆಗೆ ಆನೆ ಕಾರಿಡಾರ್ ಕೂಡ ಹಾದು ಹೋಗಲಿದೆ ಎಂದು ಹೂವರ್ ದೂರಿದ್ದಾರೆ.
ಸಂಜಯ್ ಗುಬ್ಬಿ ಅವರ ಪತ್ನಿ ಹೆಸರಲ್ಲಿ ಜಮೀನಿದ್ದು ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಆದರೆ, ಈ ಹಿಂದೆ ಬಂಡೀಪುರ ಸಿಎಫ್ಒ ಆಗಿದ್ದ ನಟೇಶ್ ಮನವಿ ಕೊಟ್ಟ ಎರಡೇ ದಿನಕ್ಕೆ ಕಟ್ಟಡ ಕಟ್ಟಲು ಅವಕಾಶ ಕೊಟ್ಟಿದ್ದಾರೆ. ಬಾಲಚಂದ್ರ ಸಿಎಫ್ಒ ಆಗಿದ್ದ ವೇಳೆ ಪರಿಸರ ಸೂಕ್ಷ್ಮ ವಲಯದಲ್ಲಿರುವ ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿದ್ದರು, ಕಣಿಯನಪುರ ಆನೆ ಕಾರಿಡಾರ್ ಉಳಿಸುವುದಕ್ಕಾಗಿ ಅರಣ್ಯ ಇಲಾಖೆಯು NGOಗಳ ನೆರವು ಕೇಳುತ್ತಿದೆ. ಆದರೆ, ಗುಬ್ಬಿ ಅವರಿಗೆ ಹೇಗೆ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಕೊಟ್ಟರು ಎಂದು ಹೂವರ್ ಪ್ರಶ್ನಿಸಿದ್ದಾರೆ.
ಗುಬ್ಬಿ ಪ್ರತಿಕ್ರಿಯೆ: ಈ ಸಂಬಂಧ ಈಟಿವಿ ಭಾರತಕ್ಕೆ ಈಮೇಲ್ ಮೂಲಕ ಸಂಜಯ್ ಗುಬ್ಬಿ ಅವರು ಪ್ರತಿಕ್ರಿಯೆ ಕೊಟ್ಟಿದ್ದು, ಸ್ವಂತ ವೈಯಕ್ತಿಕ ಬಳಕೆಗಾಗಿ ಖಾಸಗಿ ಜಮೀನಿನಲ್ಲಿ ಕಾನೂನಿನನ್ವಯ ಪಾಲಿಸಬೇಕಾದ ಎಲ್ಲ ರೀತಿಯ ಷರತ್ತುಗಳನ್ನು ಪಾಲಿಸಲಾಗಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಊಹಾಪೋಹಗಳು ಅನಗತ್ಯವಾಗಿರುತ್ತವೆ. ಏಕಪಕ್ಷೀಯವಾಗಿ ಕೆಲವರು ಸುದ್ದಿ ಬಿತ್ತರಿಸಿದ್ದು ಕಾನೂನಿನಡಿ ಕ್ರಮ ಕೈಗೊಳ್ಳಾಗುತ್ತಿದೆ ಎಂದು ಸಂಜಯ್ ಗುಬ್ಬಿತಿಳಿಸಿದ್ದಾರೆ.
ಸಂಪರ್ಕಕ್ಕೆ ಸಿಗದ ಸಿಎಫ್ಒ: ಹೆಚ್ಚಿನ ಸ್ಪಷ್ಟನೆಗಾಗಿ ಬಂಡೀಪುರ ಸಿಎಫ್ ರಮೇಶ್ ಕುಮಾರ್ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
(ಇದನ್ನೂ ಓದಿ: ಚಾಮರಾಜನಗರದಲ್ಲಿ ಹುಲಿ ಉಗುರು ಮಾರಾಟ ಯತ್ನ: 3.5 ಲಕ್ಷ ಮೌಲ್ಯದ 8 ಉಗುರುಗಳು ವಶಕ್ಕೆ)