ಚಾಮರಾಜನಗರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರಿಗಾಗಿ ಶಾಸಕರು ಎರಡೂವರೆ ತಾಸು ಕಾದು ಸುಸ್ತಾಗಿ ಪ್ರವಾಸ ರದ್ದಾಗಿದೆ ಎಂದು ತಿಳಿದ ಬಳಿಕ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಮಧ್ಯಾಹ್ನ 1.45ಕ್ಕೆ ಜಿ.ಪಂ. ಸಭಾಂಗಣ ಪಕ್ಕದಲ್ಲಿನ ಕ್ಷೇಮ ಕೇಂದ್ರ ಉದ್ಘಾಟನೆಗಾಗಿ ಸಚಿವ ಈಶ್ವರಪ್ಪ ಅವರನ್ನು ಆಹ್ವಾನ ಮಾಡಲಾಗಿತ್ತು. ಇದರ ಜೊತೆ ಅಧಿಕಾರಿಗಳೊಟ್ಟಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಬರಬೇಕಿದ್ದ ಸಚಿವರು ಸಂಜೆ ನಾಲ್ಕಾದರೂ ಬರದೇ ಕೋರ್ ಕಮಿಟಿ ಸಭೆಯ ನೆಪವೊಡ್ಡಿ ಜಿಲ್ಲಾ ಪ್ರವಾಸವನ್ನು ಮೊಟಕುಗೊಳಿಸಿರುವುದಕ್ಕೆ ಕಾಂಗ್ರೆಸ್ ಶಾಸಕರು ಕಿಡಿಕಾರಿದ್ದಾರೆ.
ಭಾನುವಾರವಾದರೂ ಸಚಿವರು ಪ್ರವಾಸ ಹಮ್ಮಿಕೊಂಡಿದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಮಧ್ಯಾಹ್ನದಿಂದ ಸಚಿವರಿಗಾಗಿ ಕಾಯುತ್ತಿದ್ದರು. ಆದರೆ ಸಚಿವರ ದಿಢೀರ್ ಪ್ರವಾಸ ರದ್ದಾಗಿದ್ದಕ್ಕೆ ಜನಪ್ರತಿನಿಧಿಗಳು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: COVID Report: ರಾಜ್ಯದಲ್ಲಿಂದು 664 ಮಂದಿಗೆ ಕೊರೊನಾ ಸೋಂಕು ದೃಢ, 8 ಸಾವು