ಚಾಮರಾಜನಗರ: ತಮಿಳುನಾಡಿನ ಕೆಲವರ ಮಾತು ಕೇಳಿಕೊಂಡು, ಮತ ರಾಜಕೀಯಕ್ಕಾಗಿ ಬಿಜೆಪಿ ಮೇಕೆದಾಟು ಯೋಜನೆ ಜಾರಿ ಮಾಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ತಮಿಳುನಾಡಿನ ಬಿಜೆಪಿ ಉಸ್ತುವಾರಿಯೇ ಅವರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯನ್ನ ಲೂಟಿ ರವಿ ಅಂಥಲೂ ಕರೆಯುತ್ತಾರೆ. ಸಿ ಟಿ ರವಿ ಅಣ್ಣಾಮಲೈಯನ್ನು ಎತ್ತಿಕಟ್ಟಿ ಧರಣಿ ಮಾಡಿಸುತ್ತಿದ್ದಾನೆ. ತಮಿಳುನಾಡಿನವರ ಮಾತು ಕೇಳಿ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಏಕ ವಚನದಲ್ಲೇ ಕಿಡಿಕಾರಿದರು.
ಮೇಕೆದಾಟು ಯೋಜನೆ ಬಗ್ಗೆ ಗೋವಿಂದ ಕಾರಜೋಳ ಮಾತನಾಡಿದ್ದು, ಅವರಲ್ಲಿ ದಾಖಲೆ ಇದೆಯಂತೆ, ಸ್ಫೋಟ ಮಾಡ್ತಾರಂತೆ. ಅದೇನು ದಾಖಲೆ ಇದೆಯೋ ಬಿಡುಗಡೆ ಮಾಡಲಿ, ಜನರಿಗೆ ಸತ್ಯ ಗೊತ್ತಾಗಲಿ ಎಂದು ಸಚಿವ ಕಾರಜೋಳರಿಗೆ ಸವಾಲು ಹಾಕಿದರು.
ವಿಧಾನಸೌಧದಲ್ಲಿ ರಾಕ್ಷಸರು: ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆಂಗಲ್ ಹನುಮಂತಯ್ಯ ಅವರು ಬರೆಸಿದ್ದಾರೆ. ಆದರೆ, ಈಗ ಅಲ್ಲಿ ಮನುಷ್ಯರ ರಕ್ತ ಹೀರುವ ರಾಕ್ಷಸರು ಇದ್ದಾರೆ. ಅವರನ್ನೆಲ್ಲಾ ಅಲ್ಲಿಂದ ಓಡಿಸಬೇಕಲ್ವಾ, ನಮ್ಮ ಕಾಲದಲ್ಲಿ ನಡೆದ ಕಾಮಗಾರಿಗಳಿಗೆ ಇನ್ನೂ ಬಿಲ್ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
(ಇದನ್ನೂ ಓದಿ: Omicron scare: ನಾಳೆಯಿಂದ ಶಾಲಾ-ಕಾಲೇಜು, ಥಿಯೇಟರ್, ಸಲೂನ್ ಬಂದ್!)
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರಗೂ ವಸತಿ ಸಚಿವ ಸೋಮಣ್ಣಗೂ ಆಗಲ್ಲ: ವಿಜಯೇಂದ್ರಗೂ, ಸಚಿವ ವಿ.ಸೋಮಣ್ಣಗೂ ಆಗ್ತಿರಲಿಲ್ಲ, ಅದಕ್ಕಾಗಿಯೇ ಸೋಮಣ್ಣ ಖಾತೆಗೆ ಒಂದು ರೂಪಾಯಿ ಕೊಟ್ಟಿರಲಿಲ್ಲ. ಹೀಗಾಗಿಯೇ ವಸತಿ ಯೋಜನೆಗಳು ಕುಂಠಿತಗೊಂಡಿವೆ. ನಾನು ಈ ಬಗ್ಗೆ ಕೇಳಿದ್ರೆ ಸೋಮಣ್ಣ ಅಸಹಾಯಕತೆ ತೋಡಿಕೊಳ್ತಾರೆ. ಹೀಗಾಗಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕಬಾರದು, ಗಡಿಜಿಲ್ಲೆಯಿಂದಲೇ ಕಾಂಗ್ರೆಸ್‌ನ ದಿಗ್ವಿಜಯ ಯಾತ್ರೆ ಆರಂಭವಾಗಬೇಕು ಎಂದು ಕರೆಕೊಟ್ಟರು.
ಸಿಎಂ ಸ್ಥಾನ ಗಟ್ಟಿ: ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಇತ್ತು. ಆದರೆ ನಾನು 10 ರಿಂದ 12 ಬಾರಿ ಬಂದಿದ್ದೆ, ಇಲ್ಲಿಗೆ ಬಂದ ನಂತರವೇ ನನ್ನ ಸಿಎಂ ಸ್ಥಾನ ಗಟ್ಟಿಯಾಯಿತು. ಆಕ್ಸಿಜನ್ ಕೊರತೆಯಿಂದ ಮೂರೇ ಜನ ಸಾವನ್ನಪ್ಪಿದ್ದು ಎಂದು ಅಂದು ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಸಚಿವ ಸುರೇಶ ಕುಮಾರ್ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದರು. ಆದರೆ 36 ಜನ ಸತ್ತಿದ್ದಾರೆ ಎಂದು ಅಧಿಕಾರಿಗಳೇ ನಮ್ಮ ಮುಂದೆ ಒಪ್ಪಿಕೊಂಡಿದ್ದರು. 36 ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ, ಸಚಿವ ಸುಧಾಕರ್ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಿ ಜನದ್ರೋಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮನೆಗೊಂದು ಆಳು ಬನ್ನಿ: ನಿಮಗೆ ನೀರು ಬೇಕು ಅಂದ್ರೆ ಮನೆಗೊಂದು ಆಳಂತೆ ಬರಬೇಕು. ಮೇಕೆದಾಟು ಯೋಜನೆಯಿಂದ ಚಾಮರಾಜನಗರಕ್ಕೂ ಅನುಕೂಲ, ಕನಿಷ್ಠ 10 ಸಾವಿರ ಜನರು ಬರಬೇಕು ಎಲ್ಲಾ ವ್ಯವಸ್ಥೆಯನ್ನು ಡಿಕೆಶಿ ಮಾಡಿದ್ದಾರೆ ಎಂದು ಆಹ್ವಾನವಿತ್ತರು.
ಬಿಜೆಪಿ ಕೆಲಸ ಕೇಳಬೇಕಷ್ಟೇ: ಡಿಕೆಶಿ ವ್ಯಂಗ್ಯ
ಕಾಂಗ್ರೆಸ್ ಕಾರ್ಯಕ್ರಮಗಳನ್ನು ಕಣ್ಣಿಂದ ನೋಡಬಹುದು. ಆದರೆ, ಬಿಜೆಪಿ ಕೆಲಸವನ್ನು ಬರೀ ಕಿವಿಯಿಂದ ಕೇಳಬೇಕಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳನ್ನು ಹೇಳಲು 3-4 ಗಂಟೆ ಬೇಕು. ಆದರೆ, ಬಿಜೆಪಿಯವರ ಒಂದೂ ಕಾರ್ಯಕ್ರಮವನ್ನಾದರೂ ಹೇಳ್ತಾರಾ..? ರೈತ ವಿರೋಧಿ ಕಾಯ್ದೆ, ಎಪಿಎಂಸಿ ಕಾಯ್ದೆ, ಮತಾಂತರ ಕಾಯ್ದೆ ಹೊರತುಪಡಿಸಿ ಜನರಿಗೆ ಅನುಕೂಲವಾಗುವ ಯಾವ ಕೆಲಸವನ್ನು ಅವರು ಮಾಡಿಲ್ಲ ಎಂದು ಕಿಡಿಕಾರಿದರು.
(ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಅಪಘಾತ: ಇತ್ತೀಚೆಗಷ್ಟೇ ಮದುವೆಯಾದ ನವ ಜೋಡಿ ಸೇರಿ ಮೂವರ ದುರ್ಮರಣ)
ಕಬ್ಬಿಣದಿಂದ ಕತ್ತರಿಯನ್ನೂ ಮಾಡಬಹುದು, ಸೂಜಿಯನ್ನು ಮಾಡಬಹುದು. ಕಾಂಗ್ರೆಸ್ ಸಮಾಜವನ್ನು ಸೂಜಿ ಮೂಲಕ ಒಂದುಗೂಡಿಸುವ ಕೆಲಸ ಮಾಡಿದರೇ ಬಿಜೆಪಿ ಕತ್ತರಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆಸ್ತಿ ಡಬಲ್ ಮಾಡ್ತೀನಿ ಅಂದ್ರು. ಆದರೆ ಕನಿಷ್ಠ ಆದಾಯವನ್ನಾದರೂ ಡಬಲ್ ಮಾಡಿದ್ದಾರಾ ..? ಎಂದು ಪ್ರಶ್ನಿಸಿದರು.
ಮೇಕೆದಾಟು ಐತಿಹಾಸಿಕ ಹೋರಾಟ: ಸ್ವಾತಂತ್ರ್ಯಕ್ಕಾದರೂ ನಾವು ಹೋರಾಡಲಿಲ್ಲ. ಆದರೆ ನಮ್ಮ ನೀರಿಗಾಗಿ ಹೋರಾಟ ಮಾಡುವ ಸಂದರ್ಭ ಒದಗಿಬಂದಿದ್ದು, ಇದೊಂದು ಐತಿಹಾಸಿಕ ಹೋರಾಟವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಹಾಗೂ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಡುವೆ ಮೇಕೆದಾಟುವಿದ್ದು, ಈ ಯೋಜನೆಯಿಂದ ಎರಡು ಜಿಲ್ಲೆಗಳು ಅನುಕೂಲ ಪಡೆಯಬಹುದು. ಚಾಮರಾಜನಗರ ಜಿಲ್ಲೆಯಿಂದ ಕನಿಷ್ಠ 10 ಸಾವಿರ ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಮೇಕೆದಾಟು ಯೋಜನೆ ಜಾರಿಯಾದರೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುವುದು ತಪ್ಪಲಿದೆ. ಬೆಂಗಳೂರಿಗೆ 20 ಟಿಎಂಸಿ ಕುಡಿಯುವ ನೀರು ದೊರೆಯಲಿದೆ. ಮೇಕೆದಾಟು ಪಾದಯಾತ್ರೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯಲಿದೆ. ಪಾದಯಾತ್ರೆಗೆ ಬಿಜೆಪಿ, ಜೆಡಿಎಸ್, ಬಿಎಸ್ಪಿಯಿಂದ ಯಾರ ಬೇಕಾದರು ಬರಬಹುದು ಎಂದು ಆಹ್ವಾನವಿತ್ತರು.
(ಇದನ್ನೂ ಓದಿ: ನಿದ್ರೆಗೆ ಜಾರಿದ ಚಾಲಕ.. ಬಸ್ ನದಿಗೆ ಬಿದ್ದು ಮೂವರು ಸಾವು, 28 ಮಂದಿಗೆ ಗಾಯ)