ಚಾಮರಾಜನಗರ: ಜೆಡಿಎಸ್ ಮುಖಂಡರೊಬ್ಬರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತ ಫೋನ್ ಕಾಲ್ ಸಂಭಾಷಣೆಯೊಂದು ಜಿಲ್ಲೆಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಆರ್. ಧ್ರುವನಾರಾಯಣ ಸೋಲಿಸಲು ಜೆಡಿಎಸ್ ಮುಖಂಡರೊಬ್ಬರು ಸಂಚು ರೂಪಿಸಿದ್ದರು ಎಂಬ ಆರೋಪ ಇದಾಗಿದೆ. ಇದು ಗಡಿಜಿಲ್ಲೆಯ ಕುರುಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಫೋನ್ ಸಂಭಾಷಣೆಯಲ್ಲಿ ಜೆಡಿಎಸ್ ಮುಖಂಡರೊಬ್ಬರು ಬಿಜೆಪಿಗೆ ಮತ ಹಾಕುವಂತೆ ಹಣ ನೀಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ಹೇಳಿದ್ದಕ್ಕೆ ಕಾಂಗ್ರೆಸ್ಗೆ ಮತ ನೀಡುವಂತೆ ಸುದ್ದಿಗೋಷ್ಟಿ ನಡೆಸಿದ್ದರಲ್ಲ ಎಂದು ಕೈ ಕಾರ್ಯಕರ್ತ ಪ್ರಶ್ನಿಸುತ್ತಾನೆ. ಇದಕ್ಕೆ ಆತ ಜೆಡಿಎಸ್ ಮುಖಂಡ ಆರ್ಎಸ್ಎಸ್ ಬೆಂಬಲಿಗರಾಗಿರುವುದರಿಂದ ಬಿಜೆಪಿಗೆ ಮತ ನೀಡುವಂತೆ ಹೇಳಿದ್ದಾರೆ ಎಂದು ಉತ್ತರಿಸುತ್ತಾನೆ.
ಇನ್ನು ಈ ಕುರಿತು ಜೆಡಿಎಸ್ ಮುಖಂಡ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ವೈರಲ್ ಆಗಿರುವ ಆಡಿಯೋವನ್ನು ನನ್ನ ಏಳಿಗೆ ಸಹಿಸಲಾರದವರು ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ೪೪ ಸಾವಿರ ಮತ ಪಡೆದಿದ್ದೇನೆ. ಇದನ್ನು ಸಹಿಸದವರು ಪಿತೂರಿ ನಡೆಸಿದ್ದಾರೆ. ಆದ್ರೆ ನಾನು ಪ್ರಾಮಾಣಿಕವಾಗಿ ಮೈತ್ರಿ ಧರ್ಮ ಪಾಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಧರ್ಮ ಪಾಲನೆಯಾಗಿದ್ದರೆ ಸಂಸದ ಧ್ರುವನಾರಾಯಣಗೆ ವರವಾಗಲಿದೆ. ಒಂದು ವೇಳೆ ಒಳೇಟು ನಿಜವಾಗಿದ್ದಲ್ಲಿ ಕೈ ಗೆ ಹನೂರಿನಲ್ಲಿ ಲೀಡ್ ಬರುವುದು ಕಷ್ಟ ಎಂದು ಹೇಳಲಾಗ್ತಿದೆ.