ಚಾಮರಾಜನಗರ: ಇದೇ ಜುಲೈ1 ರಿಂದ ತರಗತಿಗಳು ಆರಂಭವಾಗಲಿದ್ದು, ನೇರ ತರಗತಿ ಸದ್ಯಕ್ಕಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು. ನಗರದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನೇರ ತರಗತಿಗಳು ಆರಂಭವಿಲ್ಲ. ಆನ್ಲೈನ್ ಹಾಗೂ ದೂರದರ್ಶನದ ಮೂಲಕ ಶಿಕ್ಷಣ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪಡೆದು ಶಾಲೆ ಆರಂಭವಾಗಲಿದೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ಸೇರುತ್ತಿದ್ದಾರೆ. ಕಳೆದ ವರ್ಷ ಒಂದೂವರೆ ಲಕ್ಷದಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಈ ಬಾರಿಯೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಬರುವ ಸಾಧ್ಯತೆ ಇದೆ. ಸರ್ಕಾರಿ ಶಾಲೆಗೆ ಬರುವ ಎಲ್ಲಾ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಮೂರನೇ ಅಲೆ ತಡೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಮಕ್ಕಳಿಗೋಸ್ಕರ ವಿಶೇಷ ವಾರ್ಡ್ ಸಿದ್ಧತೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸದ್ಯ 6.5 ಪಾಸಿಟಿವಿಟಿ ರೇಟ್ ಇದ್ದು ಮರಣ ಪ್ರಮಾಣವೂ ಕುಸಿದಿದೆ ಎಂದು ಮಾಹಿತಿ ನೀಡಿದರು.