ಚಾಮರಾಜನಗರ: ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ತಿಂಗಳೊಂದಕ್ಕೆ ಸರಾಸರಿ 10 ವಿವಾಹಗಳು ನಡೆದಿದ್ದು, ಕೆಲವು ಒಪ್ಪಂದಗಳು ನಡೆಯಲಿವೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಕುರಿತು ಓಡಿಪಿ ಸಂಸ್ಥೆ ಅಂಕಿ ಅಂಶಗಳನ್ನು ಈಟಿವಿ ಭಾರತಕ್ಕೆ ಒದಗಿಸಿದ್ದು, 2018ರ ಜನವರಿಯಿಂದ ಡಿಸೆಂಬರ್ವರೆಗೆ 117 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. 2016 ಏಪ್ರಿಲ್ನಿಂದ 2017 ಏಪ್ರಿಲ್ವರೆಗೆ 117, 2017 ಏಪ್ರಿಲ್ನಿಂದ ಡಿಸೆಂಬರ್ವರೆಗೆ 101 ವಿವಾಹ ನಡೆದಿದ್ದು, ಹೆಚ್ಚು ಬಾಲ್ಯವಿವಾಹ ನಡೆಯುವ ಜಿಲ್ಲೆಗಳ ಪಟ್ಟಿಯಲ್ಲಿ ಚಾಮರಾಜನಗರ 6ನೇ ಸ್ಥಾನ ಪಡೆದಿದೆ.
ಸಾಕಷ್ಟು ಅರಿವು, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹ ಎಂಬುವುದು ಹಿಂದುಳಿದ ವರ್ಗಗಳಲ್ಲಿ ಇಂದಿಗೂ ಮೂಢನಂಬಿಕೆಯಾಗಿ ಉಳಿದಿದೆ. 16ರ ವಯಸ್ಸಿನಲ್ಲಿ ವಿವಾಹ ಮಾಡಿಕೊಡುವ ಸಂಪ್ರದಾಯ ಹಾಗೂ ಬಾಲ್ಯ ವಿವಾಹದಲ್ಲಿ ವರದಕ್ಷಿಣೆ ಇಲ್ಲದಿರುವುದರಿಂದ ಈ ಪಿಡುಗು ಹೆಚ್ಚಾಗಿ ನಡೆಯಲು ಕಾರಣವಾಗಿದೆ.
ಪಾಲಕರ ಚಾಣಕ್ಷತನ:
ಕಾನೂನಿನ ಎಲ್ಲಾ ನಿಯಮಗಳೂ ತಿಳಿದರೂ ಕೂಡ ಬಾಲ್ಯ ವಿವಾಹಗಳನ್ನು ಪೋಷಕರು ಮಾಡುತ್ತಿದ್ದು, ಇದಕ್ಕೆ ಕೆಲ ಪ್ರಭಾವಿಗಳ ಬೆಂಬಲವೂ ಇದೆ ಎನ್ನಲಾಗುತ್ತಿದೆ. ವಿವಾಹ ನಡೆಯುತ್ತಿರುವುದು ನೆರೆ ಮನೆಗೂ ತಿಳಿಯದಂತೆ ಚಾಣಕ್ಷತನವನ್ನು ಪಾಲಕರು ಮೆರೆಯುತ್ತಿದ್ದಾರೆ. ಚಪ್ಪರ ಹಾಕದೆ, ಲಗ್ನ ಪತ್ರಿಕೆಗಳನ್ನು ಮುದ್ರಿಸದೆ, ಛತ್ರಗಳಲ್ಲಿ ಮದುವೆ ಮಾಡದೇ ಮಧ್ಯರಾತ್ರಿ ಇಲ್ಲವೇ ಬೆಳಗಿನ ಜಾವ ದೂರದ ಊರುಗಳ ದೇವಾಲಯಗಳಲ್ಲಿ ಮದುವೆ ಮಾಡಿಸಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಹೋದರು ಕೂಡ ವಿವಾಹ ನಡೆದಿದೆ ಎಂಬುದರ ಬಗ್ಗೆ ಸಾಕ್ಷ್ಯಗಳೂ ಲಭ್ಯವಾಗುವುದಿಲ್ಲ. ವಿವಾಹ ಮಾಡಿಕೊಟ್ಟು ಬಾಲಕಿ ಕುತ್ತಿಗೆಯಿಂದ ತಾಳಿ ತೆಗೆಯುವ ಪಾಲಕರು, ಬೆಳಗ್ಗೆ ಆಕೆಯನ್ನು ಶಾಲೆಗೆ ಕಳುಹಿಸಿ ಏನು ಆಗದಂತಿರುವ ವಾತಾವರಣವನ್ನು ಪಾಲಕರು ನಿರ್ಮಿಸುತ್ತಿದ್ದಾರೆ. ಬಳಿಕ, ಕೆಲವು ದಿನಗಳು ಕಳೆದ ನಂತರ ದೇವರಿಗೆ ಕಾಣಿಕೆ ಅರ್ಪಿಸಿ ಮಗಳ ಕೊರಳಿಗೆ ಮತ್ತೆ ತಾಳಿ ಏರಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿವೆ.
ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಿದ್ದರೂ ಬಾಲ್ಯ ವಿವಾಹಗಳು ನಮ್ಮ ಸಮುದಾಯದಲ್ಲಿ ಇನ್ನು ನಿಂತಿಲ್ಲ. ಗ್ರಾಮದ ಮುಖಂಡರು ಮತ್ತು ಗ್ರಾಪಂಗಳು ಇದರ ಹೊಣೆ ಹೊತ್ತರೆ ಈ ಅನಿಷ್ಠ ಪಿಡುಗು ನಿಲ್ಲಲಿದೆ. ಈ ಕುರಿತು ಶೀಘ್ರದಲ್ಲೇ ಗ್ರಾಮದ ಮುಖಂಡರು ಒಂದೆಡೆ ಸೇರಿ ಬಾಲ್ಯ ವಿವಾಹ ನಿಲ್ಲಿಸುವ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ನಮ್ಮ ಸಂಘಟನೆಯಿಂದ ಅರಿವು ಮೂಡಿಸುತ್ತೇವೆ ಎಂದು ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಪ್ರತಿಕ್ರಿಯಿಸಿದರು