ಚಾಮರಾಜನಗರ: ಹದಿನಾರು ವರ್ಷದ ಬಾಲಕಿಯನ್ನು 24 ವರ್ಷದ ಯುವಕನ ಜೊತೆ ಬಾಲ್ಯ ವಿವಾಹ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಡಹಳ್ಳಿಯ ಪಕ್ಕದ ಊರಾದ ಅಣ್ಣೂರು ಕೇರಿಯ 16 ವರ್ಷದ ಬಾಲಕಿಗೆ ಕೋಡಹಳ್ಳಿ ಗ್ರಾಮದ 24 ವರ್ಷದ ಯುವಕ ಮಾದಪ್ಪ ಎಂಬಾತನೊಂದಿಗೆ ಬಾಲ್ಯ ವಿವಾಹ ಮಾಡಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಒಡಿಪಿ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ವಿಚಾರಿಸಲು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಪೋಷಕರು ಮದುವೆ ಆಗಿಲ್ಲವೆಂದು ಆವಾಜ್ ಹಾಕಿ ಕಳುಹಿಸಿದ್ದಾರಂತೆ. ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದ್ದರೂ ಸಿಡಿಪಿಒ, ಸೂಪರ್ ವೈಸರ್, ಪಿಡಿಒ ಸ್ಥಳಕ್ಕೆ ಹೋಗಿಲ್ಲ ಎಂದು ತಿಳಿದುಬಂದಿದೆ. ಮಾಹಿತಿ ಪಡೆಯಲು ತೆರಳಿದ್ದ ಒಡಿಪಿ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ವಿರುದ್ಧ ಪಾಲಕರು ಹರಿಹಾಯ್ದಿರುವ ವಿಡಿಯೋ ಒಂದು ಲಭ್ಯವಾಗಿದೆ.
ಈ ಕುರಿತು ಒಡಿಪಿ ಸಂಸ್ಥೆಯ ಲತಾ ಮಾಹಿತಿ ನೀಡಿದ್ದು, ಮದುವೆಯಾದ ಬಾಲಕಿಯನ್ನು ಸದ್ಯ ಹುಡುಗನ ಮನೆಯಲ್ಲೇ ಬಚ್ಚಿಟ್ಟಿದ್ದಾರೆ. ಬಾಲಕಿಯನ್ನು ಬಚ್ಚಿಟ್ಟು ಹುಡುಗನ ತಂಗಿಗೆ ಸೀರೆ ಉಡಿಸುವ ಶಾಸ್ತ್ರ ಮಾಡಿಸಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ. ಗ್ರಾಮಸ್ಥರು ಮದುವೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಮದುವೆ ನಡೆದಿರುವುದು ನಿಜವೇ ಆಗಿದ್ದರೆ, ಪೊಲೀಸರ ರಕ್ಷಣೆ ಪಡೆದು ಬಾಲಕಿಯನ್ನು ರಕ್ಷಿಸಲಾಗುವುದು ಮತ್ತು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಉಪ್ಪಾರ ಸಮುದಾಯದ ಮುಖಂಡರು ಬಾಲ್ಯವಿವಾಹ ವಿರುದ್ಧ ಜಾಗೃತಿ ಸಭೆಗಳನ್ನು ನಡೆಸಿದ್ದರು. ಬಾಲ್ಯ ವಿವಾಹ ಕಂಡು ಬಂದರೇ ಸಮಾಜಕ್ಕೆ ದಂಡ ನೀಡಬೇಕು ಎಂದು ಎಚ್ಚರಿಸಿದ್ದರು.