ಚಾಮರಾಜನಗರ: ಅರಿವಳಿಕೆ ತಜ್ಞೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯ ಅರಿವಳಿಕೆ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಸಿಂಧುಜಾ (28) ಮೃತ ಯುವತಿ. ಇಂದು ಕರ್ತವ್ಯಕ್ಕೆ ಹಾಜರಾಗದೇ ಇದ್ದಿದ್ದರಿಂದ ಸಹೋದ್ಯೋಗಿಗಳು ಮನೆಗೆ ತೆರಳಿ ನೋಡಿದ ವೇಳೆ ಮೃತಪಟ್ಟಿರುವುದು ಗೊತ್ತಾಗಿದೆ.
ಸಿಂಧುಜಾ ಮೂಲತಃ ತಮಿಳುನಾಡಿದ ಚೆನ್ನೈನವರಾಗಿದ್ದು, ಎಂಬಿಬಿಎಸ್ ಕೋರ್ಸ್ ಮುಗಿಸಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು. ಶಿಕ್ಷಣದ ಭಾಗವಾಗಿ ಕೊಳ್ಳೇಗಾಲದಲ್ಲಿ ಅರಿವಳಿಕೆ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಂಧುಜಾ ಅವರ ಮೃತದೇಹ ನೆಲದ ಮೇಲೆ ಬಿದ್ದಿದ್ದು, ಪಕ್ಕದಲ್ಲೇ ಸಿರಿಂಜ್, ಔಷಧ, ಚಾಕು ಇನ್ನಿತರ ವಸ್ತುಗಳು ಕಂಡುಬಂದಿವೆ. ಸಿಂಧುಜಾಗೆ ಮುಂದಿನ ಜನವರಿಯಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು. ಮೃತರ ಪೋಷಕರು ಚೆನೈನಿಂದ ಆಗಮಿಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರತ್ಯೇಕ ಘಟನೆ- ಗುಂಡ್ಲುಪೇಟೆಯಲ್ಲಿ ದರೋಡೆ ಪ್ರಕರಣ: ಕೇರಳ ಮೂಲದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿದ ಗುಂಪೊಂದು 44 ಲಕ್ಷ ರೂ. ದರೋಡೆ ಮಾಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪದಲ್ಲಿ ಗುರುವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ಚಿನ್ನದ ವ್ಯಾಪಾರಿ ರಹೀಂ ಮತ್ತು ಆತನ ಸ್ನೇಹಿತ ನೌಫಾಜ್ ಇಬ್ಬರು ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಹಣ ತೆಗೆದುಕೊಂಡು ಕೇರಳಕ್ಕೆ ತೆರಳುತ್ತಿದ್ದ ವೇಳೆ ದರೋಡೆ ನಡೆದಿದೆ. ಕೇರಳ ಮೂಲದ ದರೋಡೆಕೋರರ ಸುಮಾರು 10 ಮಂದಿಯ ಗುಂಪೊಂದು ಎರಡು ಕಾರು ಹಾಗೂ ಒಂದು ಲಾರಿಯಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ ಅಗತಗೌಡನಹಳ್ಳಿ ಸಮೀಪ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ವ್ಯಾಪಾರಿಗೆ ಥಳಿಸಿ, ಆತನ ಬಳಿಯಿದ್ದ ಹಣವನ್ನು ದೋಚಿದ್ದಾರೆ. ಈ ವೇಳೆ, ಕಾರಿನಲ್ಲಿದ್ದ ನೌಫಾಜ್ ಇಳಿದು ಓಡಿ ಹೋಗಿದ್ದಾರೆ. ನಂತರ ಚಿನ್ನದ ವ್ಯಾಪಾರಿ ಬೇಗೂರು ಪೊಲೀಸ್ ಠಾಣೆಗೆ ಆಗಮಿಸಿ, ದರೋಡೆ ಸಂಬಂಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೇಗೂರು ಠಾಣೆ ಪೊಲೀಸರು ತನಿಖೆ ಆರಂಭಿಸಿ, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಪಿಕ್ನಿಕ್ಗೆ ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಸಾವು