ಚಾಮರಾಜನಗರ: ಪ್ರಾಣಿಗಳ ಉಪಟಳ ದಿನ ದಿನಕ್ಕೆ ಹೆಚ್ಚುತ್ತಿದ್ದು ನರಹಂತಕ ಹುಲಿ, ಪುಂಡಾನೆ ಬಳಿಕ ಈಗ ಚಿರತೆ ಹಾವಳಿ ಹೆಚ್ಚಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಮಹೇಶ್ ಎಂಬುವರ ಮನೆಯ ಬಳಿ ಚಿರತೆ ದಾಳಿ ನಡೆಸಿ ಒಂದು ಮೇಕೆ,ಒಂದು ಕುರಿಯನ್ನು ಬಲಿ ಪಡೆದಿದೆ. ಇನ್ನು ಚಾಮರಾಜನಗರ ತಾಲೂಕಿನ ಬಿ.ಮಲ್ಲಯ್ಯನಪುರ ಗ್ರಾಮದ ಶಂಕರಪ್ಪ ಎಂಬವರ ಜಮೀನಿನಲ್ಲಿ ಕುರಿಮರಿಯೊಂದರ ಮೇಲೆ ಚಿರತೆ ದಾಳಿ ಮಾಡಿ ಅರ್ಧ ತಿಂದು ಪರಾರಿಯಾಗಿದೆ.
ಹನೂರು ತಾಲೂಕಿನ ಅಜ್ಜಿಪುರ ರಸ್ತೆಯಲ್ಲಿ ಚಿರತೆಯೊಂದು ಕೆಲದಿನಗಳಿಂದ ರಸ್ತೆಯ ಪಕ್ಕವೇ ಬಂದು ನಿಲ್ಲುತ್ತಿದ್ದು ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ. ತಮಿಳುನಾಡಿನ ಪುಂಡಾನೆ ದಾಳಿಯ ಆತಂಕದಲ್ಲಿದ್ದ ಜನತೆಗೆ, ಇಂದು ಚಿರತೆಗಳು ಹಾವಳಿ ನಡೆಸಿರುವುದು ಜನರನ್ನು ಮತ್ತಷ್ಟು ಗಾಬರಿಗೊಳಿಸಿದೆ.