ಚಾಮರಾಜನಗರ: ಹಲವು ದಿನಗಳಿಂದ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಇದೀಗ ಬೋನಿಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಕುಣಗಳ್ಳಿ ಗ್ರಾಮದಲ್ಲಿಟ್ಟಿದ್ದ ಬೋನಿಗೆ ಅಂದಾಜು 6 ವರ್ಷದ ಗಂಡು ಚಿರತೆ ಬಿದ್ದಿದೆ. ಈ ಹಿಂದೆ ಸಾಕಷ್ಟು ಬೀದಿ ನಾಯಿಗಳು, ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಈ ಚಿರತೆ ಮಂಗಳವಾರವೂ ಕರುವೊಂದನ್ನು ಬಲಿ ಪಡೆದಿತ್ತು. ಸದ್ಯ ಈ ಚಿರತೆ ಸೆರೆಯಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಇದನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಆರ್ಎಫ್ಒ ನವೀನ್ ಕುಮಾರ್ ತಿಳಿಸಿದ್ದಾರೆ.
ಚಿರತೆ ದಾಳಿ:
ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಉಡಿಗಾಲ ಗ್ರಾಮದಲ್ಲಿ ಶಿವಪ್ಪ ಎಂಬವರಿಗೆ ಸೇರಿದ ಎರಡು ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.
ಇದನ್ನೂ ಓದಿ: ಮೈಸೂರು: ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಒಂದು ಕುರಿಯನ್ನು ಸಂಪೂರ್ಣ ತಿಂದುಹಾಕಿದ ಚಿರತೆ ಬಳಿಕ ಪರಾರಿಯಾಗಿದೆ. ಪರಿಣಾಮ, ರೈತರು ಚಿರತೆ ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.