ಚಾಮರಾಜನಗರ: ಕೊರೊನಾ ಸೋಂಕು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದ ಮಾ. 28ರವರೆಗೆ ಚಾಮರಾಜನಗರ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಗಾದಿ ಹಬ್ಬದ ಸಡಗರದಲ್ಲಿ ಸಾಮಾಜಿಕ ಅಂತರದ ಬಗ್ಗೆ ಜನರು ಅಸಡ್ಡೆ ತೋರುವುದರಿಂದ ಅನಿವಾರ್ಯವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಡಿಯಲ್ಲಿ ಅಗತ್ಯ ವಸ್ತುಗಳ ವಾಹನ ಹೊರತುಪಡಿಸಿ ಎಲ್ಲಾ ಖಾಸಗಿ ವಾಹನಗಳು ಜಿಲ್ಲೆ ಪ್ರವೇಶಿಸುವುದನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಅಂತರ್ ರಾಜ್ಯ, ಅಂತರ್ ಜಿಲ್ಲೆ ಹಾಗೂ ಜಿಲ್ಲೆಯ ಒಳಗೆ ಸಂಚರಿಸುವ ಎಲ್ಲಾ ಖಾಸಗಿ ಬಸ್ಗಳಿಗೂ ನಿರ್ಬಂಧವಿದೆ. ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶವಿದೆ. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು, ಇದೇ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿ ಮತ್ತು ಡಿ ವರ್ಗದ ಮಹಿಳೆಯರು, 50 ವರ್ಷ ಮೇಲ್ಪಟ್ಟ ಎಲ್ಲರಿಗೂ ವೇತನ ಸಹಿತ ರಜೆ ನೀಡಲಿದ್ದು, ಅವರು ಕಚೇರಿಗೆ ಬರುವ ಅವಶ್ಯಕತೆ ಇಲ್ಲ ಎಂದರು. ಸಾರ್ವಜನಿಕರ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.