ಚಾಮರಾಜನಗರ: ನಗರದ ಪೊಲೀಸ್ ಗಣಪತಿಯ ಶೋಭಾಯಾತ್ರೆಯನ್ನು ಬಹಳ ಅದ್ಧೂರಿಯಾಗಿ ನಡೆಸಲಾಯಿತು.
ಸೋಮವಾರ ಬೆಳಗ್ಗೆ 10:45 ಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದ ಬಳಿಕ, ಜಾನಪದ ಕಲಾತಂಡಗಳೊಂದಿಗೆ ನಗರದ್ಯಾಂತ ಮೆರವಣಿಗೆ ಮಾಡಲಾಯಿತು. ಬರೋಬ್ಬರಿ 16 ತಾಸು ನಡೆದ ಉತ್ಸವದ ಬಳಿಕ ದೊಡ್ಟರಸಿನ ಕೊಳದಲ್ಲಿ ಕ್ರೇನ್ ಸಹಾಯದಿಂದ ಮೂರ್ತಿಯನ್ನು ನಿಮಜ್ಜನಗೊಳಿಸಲಾಯಿತು.
ಗುಂಡ್ಲುಪೇಟೆ ಸರ್ಕಲ್ ನ ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ಹಾದು ಹೋಗುವಾಗ ಶಾಂತಿ-ಸುವ್ಯವಸ್ಥೆಯ ದೃಷ್ಟಿಯಿಂದ ಡಿಸಿ ಬಿ.ಬಿ. ಕಾವೇರಿ, ಎಸ್ ಪಿ ಹೆಚ್.ಡಿ. ಆನಂದಕುಮಾರ್, ಎಸಿ ನಿಖಿತಾ ಚಿನ್ನಸ್ವಾಮಿ ಸ್ಥಳದಲ್ಲಿ ಹಾಜರಿದ್ದರು.
ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡುಬರುವುದರಿಂದ ಈ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ, ಹಿಂದೂ ಪರ ಸಂಘಟನೆಗಳು ಪ್ರತಿಷ್ಟಾಪಿಸುವುದರಿಂದ ಆರ್ಎಸ್ಎಸ್ ಗಣಪತಿ ಎಂದು ಕರೆಯಲಾಗುತ್ತದೆ.