ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಸಮೃದ್ಧ ಅರಣ್ಯ ಸಂಪತ್ತು ಹೊಂದಿರುವ ಚಾಮರಾಜನಗರ ಜಿಲ್ಲೆಯ ಜನತೆಯು ಸಿಎಂ ಬಿ.ಎಸ್. ಯಡಿಯೂರಪ್ಪ ಮಾ.8 ರಂದು ಮಂಡಿಸಲಿರುವ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಸಿಎಂ ಬರದಿದ್ದರೂ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂಬ ನಿರೀಕ್ಷೆ ಜನರದ್ದಾಗಿದ್ದು, ಬಹುಗ್ರಾಮ ಕುಡಿಯುವ ನೀರು, ಅರಿಶಿಣವನ್ನು ಒಂದು ಜಿಲ್ಲೆ- ಒಂದು ಉತ್ಪನ್ನ ಆಯ್ಕೆಯಾಗಿರುವುದರಿಂದ ಅರಿಶಿಣ ಸಂಸ್ಕರಣ ಘಟಕ, ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಹೆಚ್ಚಿನ ಅನುದಾನ, ಪ್ರವಾಸೋದ್ಯಮಕ್ಕೆ ಉತ್ತೇಜನ, ಗುಂಡ್ಲುಪೇಟೆಯಲ್ಲಿ ಕೈಗಾರಿಕಾ ಪಾರ್ಕ್, ಕೊಳ್ಳೇಗಾಲದಲ್ಲಿ ರೇಷ್ಮೆ ಪಾರ್ಕ್ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಚಾಮರಾಜನಗರದ ಕರಿಕಲ್ಲಿಗೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇರುವುದರಿಂದ ಗ್ರಾನೈಟ್ ಪಾರ್ಕ್ ಸ್ಥಾಪಿಸಿ ಬ್ರಾಂಡಿಂಗ್ ಮಾಡುವುದು, ಗಡಿಜಿಲ್ಲೆ ಆಗಿರುವುದರಿಂದ ಕನ್ನಡ ಭವನ ನಿರ್ಮಾಣ, ಚಾಮರಾಜನಗರದಲ್ಲಿ ಉಪನಗರ ನಿರ್ಮಾಣ, ಯುವಕರು ಗುಳೇ ಹೋಗುವುದನ್ನು ತಪ್ಪಿಸಲು ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಕೈಗಾರಿಕೆಗಳನ್ನು ಆಕರ್ಷಿಸುವುದು, ಮಹಿಳೆಯರ ಉದ್ಯೋಗಕ್ಕಾಗಿ ಗಾರ್ಮೆಂಟ್ಸ್ ಆರಂಭಕ್ಕೆ ಉತ್ತೇಜನವನ್ನು ಯಡಿಯೂರಪ್ಪ ನೀಡುತ್ತಾರೆ ಎಂಬ ನಿರೀಕ್ಷೆ ಈ ಬಾರಿಯಾದರೂ ಹುಸಿಯಾಗುವುದಿಲ್ಲ ಎನ್ನುತ್ತಾರೆ ಜನರು.
ಪಕ್ಕದ ಜಿಲ್ಲೆಯಾದ ಮೈಸೂರು ಪ್ರವಾಸಿಗರನ್ನು ಸೆಳೆಯುವ ರೀತಿಯಲ್ಲಿ ಡಬಲ್ ಡೆಕ್ಕರ್ ಬಸ್ ಗಳು, ವಿಶೇಷ ರೈಲುಗಳ ಮೂಲಕ ಪ್ರವಾಸಿಗರನ್ನು ಬರಮಾಡಿಕೊಳ್ಳುವಂತೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಚಾಮರಾಜನಗರವನ್ನು ಅಭಿವೃದ್ಧಿಪಡಿಸಿ ಸ್ಥಳೀಯ ಯುವಕರಿಗೆ ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಮುಂದಾಗಬೇಕಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಜನರು ನಿತ್ಯ ಅನುಭವಿಸುತ್ತಿರುವ ರಸ್ತೆ, ಆರೋಗ್ಯದ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಸ್ತುವಾರಿ ಜಿಲ್ಲೆಯಾಗಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಚಾಮರಾಜನಗರಕ್ಕೆ ಹೆಚ್ಚಿನ ಲಾಭ ಜಿಲ್ಲೆಗೆ ಆಗಬಹುದು ಎಂಬ ಆಶಾಭಾವನೆ ಇದೆ. ಕೊರೊನಾ ಹೊಡೆತದಿಂದ ಆಗಿರುವ ಸಂಕಷ್ಟದ ನಡುವೆಯೂ ಸಿಎಂ ಬಿಎಸ್ವೈ ಚಾಮರಾಜನಗರಕ್ಕೆ ಸಂತಸದ ಬಜೆಟ್ ಕೊಡುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.