ಚಾಮರಾಜನಗರ: ವೈದ್ಯಕೀಯ ಮಹಾವಿದ್ಯಾಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ 56 ಜನರಿದ್ದು, 40 ಮಂದಿ ಪುರುಷರು ಹಾಗೂ 16 ಮಂದಿ ಮಹಿಳೆಯರಿದ್ದಾರೆ.
ಒಟ್ಟು 12 ಶೌಚಾಲಯಗಳಿದ್ದು ಉತ್ತಮ ಸ್ಥಿತಿಯಲ್ಲಿದೆ. ಗ್ರಾಮೀಣ ಭಾಗದ ಜನರಿರುವುದರಿಂದ ಪಾಶ್ಚಾತ್ಯ ಶೈಲಿಯ ಕಮೋಡ್ ಬಳಸಲು ಕೆಲವರಿಗೆ ತೊಂದರೆಯಾಗುತ್ತಿದ್ದು, ಉಳಿದಂತೆ ಶೌಚಾಲಯವನ್ನು ಶುಚಿಗೊಳಿಸಲಾಗುತ್ತದೆ ಎಂದು ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಯುವಕ ತಿಳಿಸಿದರು.
ಗುಂಡ್ಲುಪೇಟೆಯ ಪುರಸಭಾ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ಶೌಚಾಲಯ ಅನೈರ್ಮಲ್ಯವಾಗಿತ್ತು. ಪ್ರತಿಭಟನೆಯ ಬಳಿಕ ಅದೂ ಕೂಡ ಸರಿಹೋಗಿದ್ದು, ನಮಗಿಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ತಿಳಿಸಿದರು.
ಉತ್ತಮ ಊಟ, ಸಂಜೆ ವೇಳೆ ಟೀ- ಬಿಸ್ಕೀಟ್ ಕೊಡುತ್ತಿದ್ದಾರೆ. ನಮಗೀಗ ಯಾವುದೇ ಮಾತ್ರೆಗಳನ್ನು ನೀಡುತ್ತಿಲ್ಲ. ಮನೆಯಲ್ಲಿ ವ್ಯವಸ್ಥೆ ಇರುವವರೆಗೆ ಹೋಂ ಕ್ವಾರಂಟೈನ್ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಬೊಮ್ಮಲಾಪುರದ ಇನ್ನೊಬ್ಬ ಯುವಕ ಮಾತನಾಡಿ, ಕೊರೊನಾ ಬಂದಿದೆ ಎಂದು ತಿಳಿದ ಬಳಿಕ ಏನು ಮಾಡಬೇಕು?. ಮತ್ತೆ ಊರಿಗೆ ಹೇಗೆ ಹೋಗಲೇ? ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಕೋವಿಡ್ ಆಸ್ಪತ್ರೆಯಲ್ಲಿ ಒಂದು ದಿನವಿದ್ದು, ಇಲ್ಲಿಗೆ ಬಂದ ಬಳಿಕ ವೈದ್ಯರು, ದಾದಿಯರು ಧೈರ್ಯದ ಮಾತುಗಳನ್ನು ಹೇಳಿದರು ಎಂದರು.
ನಮಗಿಲ್ಲಿ ಹೊಸ ಹೊಸ ಸ್ನೇಹಿತರಾಗಿದ್ದಾರೆ. ಆಗಾಗ ಥರ್ಮಲ್ ಟೆಸ್ಟ್ ಮಾಡುತ್ತಾರೆ. ಕೆಲವು ದಿನ ಮಾತ್ರೆ ಕೊಟ್ಟಿದ್ದರು. ಈಗ ಯಾವುದೇ ಮಾತ್ರೆಗಳನ್ನು ಕೊಡುತ್ತಿಲ್ಲ, ಜ್ವರ- ತಲೆನೋವು ಯಾವುದೂ ಇಲ್ಲ ಎಂದು ಹೇಳುತ್ತಾ ನಿರಾಳರಾದರು.
ಮಧುಮೇಹಿ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ನಾನು ಆರಾಮವಾಗಿ ಇದ್ದೇನೆ. ಪುಟಾಣಿ ಮಕ್ಕಳು ಕೂಡ ಇದ್ದರು, ಈಗ ಇಬ್ಬರು ಮಕ್ಕಳಿದ್ದಾರೆ. ಬಹುತೇಕ ಎಲ್ಲರೂ ಮೊಬೈಲ್ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದು, ಇಲ್ಲಿಗೆ ಬರುವ ವ್ಯಕ್ತಿಗಳು ಸಮಯವನ್ನು ಉಪಯುಕ್ತವಾಗಿಸಿಕೊಳ್ಳುವಂತೆ ಮಾಡಲು ಜಿಲ್ಲಾಡಳಿತ ಏನಾದರೂ ಚಿಂತಿಸಬೇಕು ಎಂದರು. ಬೇರೆ ಜಿಲ್ಲೆಗಳ ಸ್ಥಿತಿಯನ್ನು ಮೊಬೈಲ್ನಲ್ಲಿ ನೋಡಿದಾಗ ನಮ್ಮದು ಎಷ್ಟೋ ಪಾಲು ಉತ್ತಮ ಎನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ನ ವ್ಯವಸ್ಥೆಯ ಬಗ್ಗೆ ಬಹುತೇಕ ಎಲ್ಲರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲರಲ್ಲೂ ಮಾತನಾಡುವಾಗ ಮನೆಗೆ ತೆರಳಬೇಕೆಂಬ ಧಾವಂತ ಕಾಣುತ್ತಿತ್ತು. ರೋಗ ಲಕ್ಷಣಗಳಿಲ್ಲದೇ ಇರುವ ಸೋಂಕಿತರಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಕಾಲಹರಣ ಮಾಡುವುದು ಕೆಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.