ಚಾಮರಾಜನಗರ : ಯಕ್ಷಗಾನ ಎಂದರೆ ಕರಾವಳಿ ಭಾಗದಲ್ಲಿ ಮಾತ್ರವಲ್ಲ, ಗಡಿಜಿಲ್ಲೆಯಲ್ಲೂ ಅದರ ಬೇರಿದೆ ಎಂದು ತೋರಿದ್ದ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಬಂಗಾರಾಚಾರ್ ಅವರಿಗೆ ರಾಜ್ಯೋತ್ಸವ ಗರಿ ಸಂದಿದೆ.
84 ವರ್ಷದ ಬಂಗಾರಾಚಾರ್ ಅವರಿಗೆ ಯಕ್ಷಗಾನದ ಕಲೆ ತಂದೆಯಿಂದ ಬಳವಳಿಯಾಗಿ ಬಂದಿದ್ದು 4-5 ತಲೆಮಾರಿನಿಂದ ಈ ಕುಟುಂಬ ಕಲೆಗೆ ಜೀವ ತುಂಬುತ್ತಿದೆ. ತಂದೆ ಇದ್ದಾಗ ಸುಭದ್ರೆ, ಶಬರಿ ಸ್ತ್ರೀ ಪಾತ್ರದಲ್ಲಿ ಮಿಂಚುತ್ತಿದ್ದರು. ಬಳಿಕ, ಭಾಗವತರಾಗಿ ಸತ್ಯ ಹರಿಶ್ಚಂದ್ರ, ಶ್ರೀರಾಮಾಂಜನೇಯ ಯುದ್ಧ, ಕುರುಕ್ಷೇತ್ರ ಪ್ರಸಂಗಗಳನ್ನು ಹೆಚ್ಚಾಗಿ ಆಡಿಸಿದ್ದಾರೆ. ಪ್ರತಿವರ್ಷ ಗ್ರಾಮದೇವತೆ ಹಬ್ಬದಲ್ಲಿ ವಾಲಿ-ಸುಗ್ರೀವ ಕಾಳಗ ಆಡಿಸುತ್ತಾ ಬಂದಿದ್ದಾರೆ.
ತಂದೆಯಿಂದ ಬಂದ ಕಲೆ ನಿಲ್ಲಬಾರದೆಂದು ಮಗ ಮಲ್ಲುಚಾರಿಗೆ ತಕ್ಕಮಟ್ಟಿಗೆ ಕಲೆಯನ್ನು ದಾಟಿಸಿದ್ದಾರೆ. ಶ್ರವಣದೋಷವಿದ್ದರೂ ಈಗಲೂ ಕಲೆಯನ್ನು ಮಗನಿಗೆ, ಸಂಬಂಧಿಕರಿಗೆ ಮಬೆಯೊಳಗೆಯೇ ಕಲಿಸುತ್ತಿದ್ದಾರೆ. 64 ವರ್ಷಗಳ ಅವರ ಸುಧೀರ್ಘ ಕಲಾಸೇವೆಯನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದರಿಂದ ಬಂಗಾರಾಚಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ.
ಆರ್ಥಿಕ ನೆರವು ಅಗತ್ಯ:
ಜಿಲ್ಲೆಯಲ್ಲಿ ಅಪರೂಪವೇ ಆಗಿರುವ ಯಕ್ಷಗಾನ ಕಲೆಯನ್ನು ಜೀವಂತವಾಗಿಟ್ಟಿರುವ ಈ ಕುಟುಂಬಕ್ಕೆ ಜಿಲ್ಲಾಡಳಿತ ಆರ್ಥಿಕ ನೆರವು ನೀಡಬೇಕಿದೆ. ಬಂಗಾರಾಚಾರ್ ಕುಟುಂಬದ ಮೂಲಕ ಆಸಕ್ತರಿಗೆ ಯಕ್ಷಗಾನವನ್ನು ಕಲಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕಿದೆ.