ಚಾಮರಾಜನಗರ : ಕೊರೊನಾ ಸೋಂಕಿತರನ್ನು ಕಳಂಕಿತರಂತೆ ಕಂಡರೇ ಹೆಚ್ಚು ಅಪಾಯ ಎಂದು ನಗರದ ಜಿಪಂ ಸಿಇಒ ಬಿ ಹೆಚ್ ನಾರಾಯಣರಾವ್ ಎಚ್ಚರಿಸಿದ್ದಾರೆ.
ಜಿಲ್ಲೆಯ ವಿವಿಧ ಕಂಟೇನ್ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿ ಸೋಂಕಿತರನ್ನು ಕಳಂಕಿತರಂತೆ ಕಾಣುತ್ತಿರುವ ಕುರಿತು ಜಾಗೃತಿ ಮೂಡಿಸುತ್ತಿರುವ ಅವರು, ಸೋಂಕಿತರನ್ನು ಕಳಂಕಿತರಂತೆ ಕಂಡರೆ ಕೆಮ್ಮು, ಶೀತ ಮುಂತಾದ ರೋಗ ಲಕ್ಷಣ ಇರುವವರು ತಪಾಸಣೆಗೆ ಒಳಗಾಗಲು ಹಿಂದೇಟು ಹಾಕಬಹುದು. ಇದರಿಂದ, ರೋಗ ಹೆಚ್ಚು ಹರಡಲು ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಜನರಿಗೆ ತಿಳಿ ಹೇಳುತ್ತಿದ್ದಾರೆ.
ಸೋಂಕಿಗೆ ಜಾತಿ, ಧರ್ಮ, ಲಿಂಗ ಬೇಧ ಎಂಬುದು ಇರುವುದಿಲ್ಲ. ಇಂದು ಒಬ್ಬರಿಗೆ ಬಂದರೆ ನಾಳೆ ಮತ್ತೊಬ್ಬರಿಗೆ ಬರಬಹುದಾದ್ದರಿಂದ ಗೌರವಯುತವಾಗಿ ಕಾಣಬೇಕು, ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವಂತೆ ಸೋಂಕಿತರನ್ನು ಅಗೌರವದಿಂದ ಕಾಣುವುದು, ಅವರಿಂದ ಊರಿಗೆ ಕಳಂಕ ಬಂದಿತೆಂದು ಮೂದಲಿಕೆ ಮಾತುಗಳು ಹೆಚ್ಚಾಗಿದ್ದರಿಂದ ಜಿಪಂ ಸಿಇಒ 51ಕ್ಕೂ ಹೆಚ್ಚು ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಕಂಟೇನ್ಮೆಂಟ್ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ ಅರಿವು ಮೂಡಿಸಲಾಗುವುದು ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.