ಚಾಮರಾಜನಗರ: ಅಂಗಡಿ, ಬ್ಯಾಂಕ್, ವಾಣಿಜ್ಯ ಮಳಿಗೆಗಳಿಗೆ ಕಳ್ಳರು ಕನ್ನ ಹಾಕುವುದನ್ನು ಕೇಳಿದ್ದೇವೆ. ಆದರೆ ಸ್ಮಶಾನಕ್ಕೂ ಕಳ್ಳರ ಕಾಟವೇ? ಹೌದು, ಇತ್ತೀಚೆಗೆ ಸ್ಮಶಾನಕ್ಕೂ ಕಳ್ಳರು ನುಗ್ಗುತ್ತಿದ್ದು ಅಲ್ಲಿರುವ ಸಾಮಗ್ರಿಗಳನ್ನು ದೋಚುತ್ತಿದ್ದಾರೆ.
ಚಾಮರಾಜನಗರ ಹೊರವಲಯದಲ್ಲಿ ಬ್ರಾಹ್ಮಣ ಚಿರಶಾಂತಿ ಧಾಮವಿದ್ದು, ಕಳ್ಳರು ಇಲ್ಲಿರುವ ಉಪಕರಣ, ವಿವಿಧ ವಸ್ತುಗಳನ್ನು ಪದೇ ಪದೇ ಕದ್ದು ಪರಾರಿಯಾಗುತ್ತಿದ್ದಾರೆ. ಹೀಗಾಗಿ, ಸ್ಮಶಾನಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಬೋರ್ವೆಲ್ ಮೋಟರ್, ಪೈಪುಗಳು, ಬಾಳೆ ಸೇರಿದಂತೆ ಕಣ್ಣಿಗೆ ಕಂಡಿದ್ದನ್ನೆಲ್ಲ ಕಳ್ಳರು ಹೊತ್ತೊಯ್ಯುತ್ತಿದ್ದಾರೆ. ದೆವ್ವವಿಲ್ಲ, ಭೂತವಿಲ್ಲ. ಆದರೆ ಕಳ್ಳರ ಕಾಟ ತಪ್ಪಿದ್ದಲ್ಲ ಎಂಬುದು ಇಲ್ಲಿನ ಸದ್ಯದ ಪರಿಸ್ಥಿತಿ.
ರುದ್ರಭೂಮಿ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುವ ಬ್ರಾಹ್ಮಣ ಸಮಾಜದ ಮುಖಂಡ ಸತೀಶ್, ಸಮುದಾಯದ ಕೆಲವರಿಂದ ದೇಣಿಗೆ ಪಡೆದು ಅಲಾರಂ ವಿಥ್ ಸಿಸಿಟಿವಿ ಅಳವಡಿಸಿದ್ದಾರೆ. ಈ ಮೂಲಕ ಕಳ್ಳರ ಕಾಟಿದಿಂದ ಮುಕ್ತಿ ಪಡೆಯಲು ಮುಂದಾಗಿದ್ದಾರೆ.
"ಹಗಲು ನೋಡಿದ ವಸ್ತುಗಳು ರಾತ್ರಿ ವೇಳೆ ಮಾಯವಾಗುತ್ತಿದ್ದವು. ಎಷ್ಟು ಸಾರಿ ಎಂಬಂತೆ ಎಲ್ಲಾ ವಸ್ತುಗಳನ್ನು ತಂದಿಡುವುದು ಎಂದು ಯೋಚಿಸಿ ಸಿಸಿಟಿವಿ ಹಾಕಲಾಗಿದೆ. ಸಿಸಿಟಿವಿ ಹಾಕಿಸಿ ಒಂದು ವಾರ ಕಳೆದಿದ್ದು ಯಾವುದೇ ಕಳ್ಳತನ ಪ್ರಕರಣ ನಡೆದಿಲ್ಲ. ಸದ್ಯ ಚಿರಶಾಂತಿ ಧಾಮಕ್ಕೆ ಶಾಂತಿ ಸಿಕ್ಕಿದೆ" ಎಂದು ಸತೀಶ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ: ಬೆಳಗಾವಿ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ, 300 ಗ್ರಾಂ ಚಿನ್ನಾಭರಣ ವಶ